ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಎಂಬ ಪದವನ್ನು ಕರ್ನಾಟಕ ಬಳಸಬಾರದು ಎಂಬ ಕೇರಳದ ವಿವಾದದಿಂದ ಇದೀಗ ಗೊಂದಲದ ಸ್ಥಿತಿ ನಿರ್ಮಾಣಗೊಂಡಿದೆ.
ಸಿಬ್ಬಂದಿ ಪ್ರತಿಭಟನೆ ಕಾರಣದಿಂದಾಗಿ ಕೆಲ ದಿನಗಳು ನಷ್ಟಕ್ಕೀಡಾಗಿದ್ದ ರಾಜ್ಯ ಸಾರಿಗೆ ಸಂಸ್ಥೆ, ನಂತರ ಲಾಕ್‌ಡೌನ್’ನಿಂದ ಸಂಚಾರವಿಲ್ಲದೆ ನಷ್ಟಕ್ಕೆ ಸಿಲುಕಿದೆ. ಇದೀಗ ಕೇರಳ ರಾಜ್ಯದ ಮೂಲಕ ಮತ್ತೊಂದು ಸಮಸ್ಯೆ ಎದುರಾಗಿದೆ. ಇಂಥ ಸಂದರ್ಭದಲ್ಲಿ ರಾಜ್ಯದ ಸಂಚಾರ ವ್ಯವಸ್ಥೆ ಬಗ್ಗೆ ಅವಲೋಕಿಸುವುದಾದರೆ, ಮಹತ್ವದ ಬೆಳವಣಿಗೆಗಳು ಸಂಭವಿಸಿವೆ.
1948ರಲ್ಲಿ 120 ವಾಹನಗಳೊಂದಿಗೆ ಆರಂಭಗೊಂಡ ಸಾರಿಗೆ ಇಲಾಖೆ ಇದೀಗ ದೇಶದ ಇತರ ನಿಗಮಗಳಿಗೆ ಹೋಲಿಸಿದರೆ ಗಾತ್ರದಲ್ಲಿ 5ನೇ ಸ್ಥಾನದಲ್ಲಿದೆ. ಬಸ್‌ಗಳ ಸಂಚಾರದ ಜತೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಅನುಮತಿ ದೊರೆತಿದ್ದು, ಪ್ರಗತಿಯಲ್ಲಿವೆ. ಇದೀಗ ರಾಜ್ಯದ ಕಲಬುರಗಿ ಸೇರಿದಂತೆ ದೇಶದ ಎಂಟು ಕಡೆಗಳಲ್ಲಿ ವಿಮಾನ ತರಬೇತಿ ಅಕಾಡೆಮಿ ಸ್ಥಾಪನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅನುಮತಿ ನೀಡಿದೆ.
ಇದರಿಂದ ರಾಜ್ಯದಲ್ಲಿ ವಿಮಾನ ಸಂಚಾರ ವ್ಯವಸ್ಥೆ ಬಲಗೊಳ್ಳುವ ಮುನ್ಸೂಚನೆ ದೊರೆತಂತಾಗಿದೆ. ಆದರೆ ವಿಮಾನ ನಿಲ್ದಾಣ
ಸ್ಥಾಪನೆಯಲ್ಲಿ ಎದುರಾಗುತ್ತಿರುವ ವಿಳಂಬವನ್ನು ಬಗೆಹರಿಸಿ ವೇಗ ದೊರಕಿಸಿದರೆ, ರಾಜ್ಯದ ಸಂಚಾರ ವ್ಯವಸ್ಥೆಯಲ್ಲಿ ಭಾರೀ
ಬದಲಾವಣೆಗಳುಂಟಾಗುವ ಸಾಧ್ಯತೆಗಳಿವೆ. ವಿದೇಶಗಳಲ್ಲಿರುವ ವಿಮಾನ ತರಬೇತಿ ಸಂಸ್ಥೆಗಳ ಮಾದರಿಯ ಭಾರತದಲ್ಲಿ ಅತ್ಯುತ್ತಮ ತರಬೇತಿ ನೀಡುವ ಉದ್ದೇಶದಿಂದ ವಿಮಾನ ತರಬೇತಿ ಅಕಾಡೆಮಿ ಸ್ಥಾಪಿಸಲಾಗುತ್ತಿದೆ.
ಅಕಾಡೆಮಿ ಸ್ಥಾಪನೆಗೆ ರಾಜ್ಯಕ್ಕೂ ದೊರೆತಿರುವ ಅವಕಾಶ ಮಹತ್ವದ್ದು. ಒಟ್ಟಾರೆ ರಾಜ್ಯದ ಸಂಚಾರ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಉಂಟಾಗಬಹುದಾದ ಮಹತ್ವಕಾಂಕ್ಷೆ ಗೋಚರಿಸುತ್ತಿದ್ದು, ವೇಗ ದೊರೆಯುವ ಮೂಲಕ ಅನುಷ್ಠಾನಕ್ಕೆ ತರುವಲ್ಲಿ ಸರಕಾರ ಮತ್ತಷ್ಟು ಆದ್ಯತೆ ನೀಡಬೇಕಿದೆ.