Sunday, 15th December 2024

ಭಾರತಕ್ಕೆ ಮುನ್ನಡೆ

ಭಾರತವು ಕರೋನಾ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿದ್ದ ಸಮಯವನ್ನು ತನ್ನ ಕುತಂತ್ರ ನಡೆಗೆ ಬಳಸಿಕೊಂಡ ಚೀನಾ, ತನ್ನ ಸೈನಿಕರ ಮೂಲಕ ಗಡಿ ಒಪ್ಪಂದ ಮುರಿದು ವಿವಾದವನ್ನು ಸೃಷ್ಟಿಸಿತು.

ಕಳೆದ ಏಳು ತಿಂಗಳಿಂದ ಕಗ್ಗಂಟಾಗಿ ಉಳಿದಿರುವ ಈ ಚೀನಾ ಗಡಿ ಬಿಕ್ಕಟ್ಟು ಇದೀಗ ಶಾಂತಿಯುತವಾಗಿ ಬಗೆಹರಿಯುವ ಲಕ್ಷಣಗಳು ಗೋಚರಿಸಿವೆ. ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಹಾಗೂ ಭಾರತೀಯ ಯೋಧರ ನಡುವೆ
ಉಂಟಾಗಿದ್ದ ಸಂಘರ್ಷದಿಂದ ಎರಡು ದೇಶಗಳ ನಡುವೆ ವಿವಾದ ಮುಂದುವರಿದಿತ್ತು. ಶಾಂತಿಯುತ ಒಪ್ಪಂದಕ್ಕೆ ಒಪ್ಪುವುದಾಗಿ ತಿಳಿಸುತ್ತಲೇ ಪದೇ ಪದೆ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಸುತ್ತಿದ್ದ ಚೀನಾದ ನಡೆ ಭಾರತವನ್ನು ಕಂಗೆಡಿಸಿತ್ತು.

ವಿವಾದದ ಇತ್ಯಾರ್ಥಕ್ಕಾಗಿ ಆರಂಭದಲ್ಲಿ ಶಾಂತಿ ಮಾತುಕತೆ ಆರಂಭಿಸಿದ ಭಾರತ ನಂತರದ ದಿನಗಳಲ್ಲಿ ಸೇನೆಯನ್ನು ಬಲಪಡಿ ಸುವ ಪ್ರಯತ್ನಕ್ಕೆ ಮುಂದಾಗಿತ್ತು. ಸಂಘರ್ಷ ಆರಂಭಗೊಂಡು ಆರು ತಿಂಗಳು ಕಳೆಯುವುದರೊಳಗೆ ಈಗಲೇ ಎರಡು ದೇಶಗಳ ನಡುವಣ ೮ ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೂ ಸಮಸ್ಯೆ ಇತ್ಯರ್ಥವಾಗದಿರುವುದರಿಂದ ತನ್ನ ನಿಲುವನ್ನು ದೃಢ ಗೊಳಿಸಿರುವ ಭಾರತ, ಚೀನಾಕ್ಕೆ ಸವಾಲೊಡ್ಡಲು ರಣತಂತ್ರವನ್ನು ರೂಪಿಸಿದೆ.

ಸಂಘರ್ಷ ಆರಂಭಗೊಂಡು ಏಳು ತಿಂಗಳು ಕಳೆದರೂ ಭಾರತದ ಒಂದಿಂಚು ಭೂಮಿಯ ಮೇಲೂ ನಿಯಂತ್ರಣ ಸಾಧಿಸಲು ಕೊಡದೆ ಸೇನೆ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ತನ್ನ ನಿಲುವನ್ನು ಬದಲಿಸಿಕೊಳ್ಳದೆ ಯುದ್ಧಕ್ಕೆ ಬದ್ಧವೆಂದು  ಘೋಷಿಸಿ ದರೂ, ಸೆಣಸಲು ಭಾರತೀಯ ಸೇನೆ ಸಜ್ಜುಗೊಂಡಿದೆ. ಅಮೆರಿಕವೂ ಚೀನಾದ ನಡೆಗೆ ವಿರೋಧ ವ್ಯಕ್ತಪಡಿಸಿ, ಭಾರತವನ್ನು ಬೆಂಬಲಿಸಲಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಚೀನಾಗೆ ಯುದ್ಧ ಮಾರ್ಗ ಕ್ಕಿಂತಲೂ ಶಾಂತಿಯುತ ಒಪ್ಪಂದ ಸೂಕ್ತ ವೆನಿಸಿದ್ದು, ಮುಂದಿನ ರಾಜತಾಂತ್ರಿಕ ಮಾತುಕತೆಯಲ್ಲಿ ಸಮಸ್ಯೆ ಇತ್ಯಾರ್ಥಗೊಳ್ಳುವ ಭರವಸೆ ವ್ಯಕ್ತವಾಗಿದೆ.

ಅನಗತ್ಯವಾಗಿ ಅತಿಕ್ರಮದ ಮೂಲಕ ಸಂಘರ್ಷಕ್ಕೆ ಕಾರಣವಾಗಿದ್ದ ಚೀನಾಗೆ ಇದೀಗ ತನ್ನ ನಡೆಯ ಬಗ್ಗೆ ತಿಳಿವಳಿಕೆ ಮೂಡಿದೆ.
ಬಿಕ್ಕಟ್ಟು ಶಮನವಾಗುವ ಸಾಧ್ಯತೆಯಿದ್ದು, ಇದು ಭಾರತೀಯ ಸೇನೆಗೆ ದೊರೆಯಲಿರುವ ಬಹುದೊಡ್ಡ ಗೌರವ.