Thursday, 12th December 2024

ಸ್ವಚ್ಛನಗರ: ಸಹಭಾಗಿತ್ವ ಇರಲಿ

ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸಿದ್ದ ಸ್ವಚ್ಛ ಸರ್ವೇಕ್ಷಣಾ ಶ್ರೇಯಾಂಕದಲ್ಲಿ ಬೆಂಗ ಳೂರಿಗೆ 45 ನಗರಗಳ ಪಟ್ಟಿಯಲ್ಲಿ 43ನೇ ಸ್ಥಾನ ಸಿಕ್ಕಿದ್ದು, ಕಳೆದ ಬಾರಿಗಿಂತ ಈ ಬಾರಿ 15 ಸ್ಥಾನಗಳಷ್ಟು ಕುಸಿದಿದೆ.

ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಗೆ ಆಯ್ಕೆಯು ಹಲವಾರು ನಿಶ್ಚಿತ ಮಾನದಂಡಗಳಿಗೆ ಅನುಗುಣ ವಾಗಿ ನಡೆಯುತ್ತದೆ ಎಂಬುದು ಬೇರೆ ಮಾತು. ಆದರೆ ಕೆಂಪೇಗೌಡರಿಂದ ಅತ್ಯಂತ ವೈಜ್ಞಾ ನಿಕವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಮಹಾನಗರಕ್ಕೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ಬರಲು ಕಾರಣ ಎಲ್ಲರೂ ಕಾರಣರೇ. ಇಲ್ಲಿ ಕೇವಲ ಜನಪ್ರತಿನಿಧಿಗಳನ್ನು, ಬಿಬಿಎಂಪಿ, ಸರಕಾರವನ್ನು ದೂರಿದರೆ ಪ್ರಯೋಜನವಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಹೊಣೆಗಾರಿಕೆಯನ್ನು ಮರೆತಿದ್ದಕ್ಕೇ ಬೆಂಗಳೂರಿನ ಮಾನ ಮರ್ಯಾದೆ ಜಾಗತಿಕ ಮಟ್ಟದಲ್ಲಿ ಹಾಳಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಬೆಂಗಳೂರಿನ ಕಸದ ಸಮಸ್ಯೆಯ ಬೃಹತ್ ಸ್ವರೂಪವೇ ಬೆಂಗಳೂರಿಗೆ ಕಸದ ನಗರ ಎಂಬ ಹಣೆಪಟ್ಟಿ ಕಟ್ಟಿದೆ. ಸ್ವಚ್ಛತೆ ಎಂಬುದು ಪ್ರಶಸ್ತಿಯ ಕಾರಣದಿಂದ ಪ್ರತಿಷ್ಠೆಯ ಪ್ರಶ್ನೆ ಯಾಗಿಯಷ್ಟೆ ಇರಬೇಕಿಲ್ಲ. ಅದು ಜನಸಾಮಾನ್ಯರೆಲ್ಲರ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯವಾಗಿರಬೇಕು.

ಬಯಲುಶೌಚವನ್ನು ಸಂಪೂರ್ಣ ಇಲ್ಲವಾಗಿಸುವುದು, ಶೌಚಾಲಯಗಳ ಲಭ್ಯತೆ ಹಾಗೂ ಅದಕ್ಕೆ ನೀರಿನ ಪೂರೈಕೆ, ಪ್ರತಿದಿನ ನಿಗದಿತ ವೇಳೆಗೆ ಮನೆಮನೆ ಕಸ ಸಂಗ್ರಹ, ಬೀದಿಯ ಕಸದ ತೊಟ್ಟಿಗಳ ಸಮರ್ಪಕ ನಿರ್ವಹಣೆ, ರಸ್ತೆಯಲ್ಲಿ ಎಂದರಲ್ಲಿ ಕಸ ಎಸೆದು ಹೋಗುವವರ ಮೇಲೆ ಕಠಿಣ ಕ್ರಮ, ಅದಕ್ಕಾಗಿ ಸಿಸಿ ಕ್ಯಾಮೆರಾಗಳ ಅಳವಡಿಕೆ, ಹಸಿಕಸ-ಒಣಕಸಗಳನ್ನು ಬೇರ್ಪಡಿಸಲು ಬುಟ್ಟಿಗಳ ಪೂರೈಕೆ, ಕಸ ನಿರ್ವಹಣೆಯನ್ನು ಪಾಲಿಸದ ವಾಣಿಜ್ಯ ಸಂಸ್ಥೆಗಳು ಹಾಗೂ ಅಪಾ ರ್ಟ್ಮೆಂಟ್‌ಗಳಿಗೆ ಭಾರಿ ದಂಡ, ಶಾಲಾ ಮಕ್ಕಳು-ಸೆಲೆಬ್ರಿಟಿಗಳನ್ನು ಸೇರಿಸಿಕೊಂಡು ನಾನಾ ಮಾಧ್ಯಮಗಳ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಿಕೆ, ಕಾಂಪೋ ತಯಾರಿ-ಬಳಕೆಗೆ ಉತ್ತೆಜನ, ಸೃಜನಶೀಲ ರೀತಿಯ ಪರಿಹಾರ ಕಲ್ಪಿಸುವವರಿಗೆ ಪ್ರೋತ್ಸಾಹ- ಇವೆಲ್ಲ ಕ್ರಮಗಳ ಮೂಲಕ ಸ್ಪರ್ಧಿಸಿದರೆ ಮುಂದಿನ ಸಾಲಿನಲ್ಲಿ ಬೆಂಗಳೂರು ಕೂಡ  ಕಾಣಿಸಿಕೊಳ್ಳಬಹುದು.

ಆದರೆ ಇದನ್ನೆಲ್ಲ ಮಾಡುವುದು ಬಿಬಿಎಂಪಿ ಕೆಲಸ ಎಂದು ಕೈಕಟ್ಟಿ ಕುಳಿತರೆ ಸಾಧ್ಯವಾಗದು. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಬೇಕು.