Sunday, 15th December 2024

ಸ್ಪಷ್ಟ ನಿರ್ಧಾರ ಅಗತ್ಯ

ಇದೇ 25 ರಿಂದ 1 ರಿಂದ 5 ನೇ ತರಗತಿವರೆಗೆ ಶಾಲಾ ತರಗತಿ ಆರಂಭಿಸಲು ಸರಕಾರ ಆದೇಶ ಹೊರಡಿಸಿದೆ. ಆದರೆ ಇದರೊಟ್ಟಿಗೆ ಹೊರಡಿಸಿರುವ ಮಾರ್ಗ ಸೂಚಿಗಳು ಸಾಕಷ್ಟು ಗೊಂದಲ ಮೂಡಿಸುವಂತಿವೆ.

ಮಕ್ಕಳು ಹಾಜರಾಗಲು ಪೋಷಕರ ಅನುಮತಿ ಕಡ್ಡಾಯ ಎಂದು ತಿಳಿಸಲಾಗಿದೆ. ಹಾಗಾದರೆ ತಂದೆ ತಾಯಿ ಬೇಡವೆಂದರೆ ಮಕ್ಕಳು ಬರುವುದಿಲ್ಲ ಎಂದ ಹಾಗಾ ಯಿತು. ಇದರ ಜತೆಗೆ ಶಾಲೆಯಲ್ಲೂ ಶೇ. 50 ರಷ್ಟು ಹಾಜರಿಗೆ ಮಾತ್ರ ಅನುಮತಿ ನೀಡಲಾಗಿದೆ. ಇದು ಅನೇಕ ಸಂಶಯ, ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಒಂದೆಡೆ ಹಾಜರಿ ಐಚ್ಛಿಕ ಎಂದಾದರೆ ಬರುವವರ ಸಂಖ್ಯೆಯಲ್ಲಿ ಸಾಕಷ್ಟು ಕಡಿಮೆಯಾಗುತ್ತದೆ. ಹಾಗಾದರೆ ಮನೆಯಲ್ಲೇ ಉಳಿಯುವವರಿಗೆ ಆನ್‌ಲೈನ್ ತರಗತಿ ಗಳನ್ನು ನಡೆಸುತ್ತಾರೆಯೇ? ಹೌದಾದರೆ ಆನ್‌ಲೈನ್, ಆಫ್ ಲೈನ್ ಎರಡೂ ತರಗತಿಗಳಿರುತ್ತವೆಯೇ? ಈಗಾಗಲೇ ಇಂಥ ಅಪಸವ್ಯ ಪಿಯುಸಿ ತರಗತಿ ವಿಚಾರ ದಲ್ಲಿ ಆಗುತ್ತಿದೆ.

ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹೋಗುತ್ತಿಲ್ಲ. ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಬೆರಳಿಣಿಕೆಯಷ್ಟಿದೆ. ಇದು ಯಾವ ರೀತಿಯ ಲೆಕ್ಕ. ಪ್ರಾಥಮಿಕ ಶಾಲೆಯ ವಿಷಯದಲ್ಲೂ ಇದೇ ಸಮಸ್ಯೆ ತಲೆದೋರಲಿದೆ. ಇನ್ನು ಶೇ. 50 ರಷ್ಟು ಮಾತ್ರ ಉಪಸ್ಥಿತಿ ಎಂದರೆ ಒಂದು ವೇಳೆ ಎಲ್ಲ ವಿದ್ಯಾರ್ಥಿಗಳು ಬಂದರೆ ಅವರಿಗೆ ಏನು ವ್ಯವಸ್ಥೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಈಗ ಕೋವಿಡ್ ಪ್ರಕರಣ ಗಳ ಸಂಖ್ಯೆ ಇಳಿಮುಖವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಾದರೆ ಮತ್ತೆ ಆಯ್ಕೆಯನ್ನೇಕೆ ಕೊಡಬೇಕು ? ಈಗ ಉಳಿದೆಲ್ಲ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ.

ವ್ಯಾಪಾರ ವಹಿವಾಟು ನಡೆಯುತ್ತಿದೆ. ಚಿತ್ರಮಂದಿರಗಳು, ಮಾಲ್, ಹೋಟೆಲ್‌ಗಳು ತೆರೆದಿವೆ. ಕಾರ್ಯಕ್ರಮಗಳು ನಡೆಯುತ್ತಿವೆ. ಚುನಾವಣಾ ಪ್ರಚಾರ, ರ‍್ಯಾಲಿ ಗಳಿಗೆ ತಡೆ ಇಲ್ಲ. ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಇಬ್ಬಗೆಯ ಧೋರಣೆ ಏಕೆ ? ಈಗಾಗಲೇ ಸುಮಾರು ಎರಡು ಶೈಕ್ಷಣಿಕ ವರ್ಷಗಳಿಂದ ಸರಿಯಾಗಿ ತರಗತಿ ಗಳು ನಡೆದಿಲ್ಲ. ಹೀಗಿರುವಾಗ ಮತ್ತೆ ಬೇಕಾಬಿಟ್ಟಿಯಾಗಿ ತರಗತಿಗಳನ್ನು ನಡೆಸುವುದು ಯಾವ ಪುರುಷಾರ್ಥಕ್ಕೆ? ಇದು ಇನ್ನಷ್ಟು ಸಮಸ್ಯೆ, ಗೊಂದಲಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಸರಕಾರೀ ವಿಷಯದಲ್ಲಿ ಸ್ಪಷ್ಟವಾದ ನಿರ್ಧಾರ ಕೈಗೊಳ್ಳಬೇಕು. ಪರ ವಿರೋಧ ಅಭಿಪ್ರಾಯಗಳು ಇದ್ದೇ ಇರುತ್ತವೆ. ಆದರೆ ಯಾವುದಾ ದರೂ ಒಂದು ಗಟ್ಟಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು.