Thursday, 12th December 2024

ಸಿಎಂ ಪರಿಹಾರ ನಿಧಿಯ ಜಾಗೃತಿ ಅಗತ್ಯ

Basavaraj Bommai

ರಾಜ್ಯದಲ್ಲಿ ಮುಖ್ಯಮಂತ್ರಿಗಳ ನಿಧಿಯಿಂದ ಪರಿಹಾರ ಕೋರಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಮರ್ಪಕ ದಾಖಲೆಗಳನ್ನು ಸಲ್ಲಿಸಬೇಕಿದ್ದು, ಈ ಸಂಬಂಧ ಮುಖ್ಯಮಂತ್ರಿಯವರು ಕಾಳಜಿ ಪೂರ್ವಕ ಜನರಲ್ಲಿ ಮನವಿ ಮಾಡಿಕೊಂಡಿದ್ದು ಸೂಕ್ತ ನಡೆ.

ಪರಿಹಾರ ಕೋರಿ ರಾಜ್ಯದ ಎಲ್ಲ ಸಚಿವರು, ಶಾಸಕರು, ಸಂಸದರುಗಳಿಗೂ ಅರ್ಜಿ ಬರುತ್ತವೆ. ರಾಜಕೀಯ ಲಾಭಕ್ಕಾಗಿ ಪ್ರತಿನಿಧಿಗಳೂ ಭರವಸೆ ನೀಡುತ್ತಾರೆ. ಆದರೆ ಬಹಳಷ್ಟು ಅರ್ಜಿಗಳು ತಿಳಿವಳಿಕೆಯ ಕೊರತೆಯಿಂದ ಪರಿಪೂರ್ಣವಲ್ಲದ, ಸಮರ್ಪಕವಲ್ಲದ ದಾಖಲೆಗಳೊಂದಿಗೆ ಸಲ್ಲಿಕೆಯಾಗುವುದಿಲ್ಲ. ಹಾಗಿದ್ದರೂ ಅಪರಿಹಾರ ಮಂಜೂರಿಗೆ ಒತ್ತಡ ತರಲಾಗುತ್ತದೆ. ಇದರಿಂದ ಅರ್ಹರಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಜತೆಗೆ ಇಂತಹ ಅಸರ್ಮಪಕ ಅರ್ಜಿಗಳಿಂದ ಶೀಘ್ರ ಕಡತ ವಿಲೇವಾರಿ ಸಾಧ್ಯವಾಗುವುದಿಲ್ಲ. ಪರಿಣಾಮ ಬಹುತೇಕ ಜನರಿಗೆ ಸಕಾಲದಲ್ಲಿ ಪರಿಹಾರ ನೀಡಲು ಸಾಧ್ಯವಾಗದೇ ಆಡಳಿತಾತ್ಮಕ ವಿಳಂಬ ಕಾಣಿಸಿ ಕೊಳ್ಳುತ್ತಿದೆ.

ಜತೆಗೆ ನಿಧಿಯ ಮುಖ್ಯ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ಉತ್ತಮ ಸರಕಾರ ಎನಿಸಿಕೊಳ್ಳುವಲ್ಲಿ ಇದು ಬೃಹತ್ ಅಡ್ಡಿ. ಇದರಿಂದಾಗಿಯೇ ಜನ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವುದು. ಇದಕ್ಕಾಗಿ ಸರಕಾರ ರಾಜ್ಯದೆಡೆ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳುವುದು ಅಗತ್ಯ. ಅದರಲ್ಲೂ ಗ್ರಾಮೀಣ ಭಾಗಗಳ
ಅನಕ್ಷರಸ್ಥರಿಗೆ ಸೂಕ್ತ ಮಾಹಿತಿ ನೀಡುವ ಜಾಹೀರು, ಬೀದಿ ನಾಟಕ, ಮಾಹಿತಿ ಶಿಬಿರಗಳ ಮುಖೇನ ಅರಿವು ಮೂಡಿಸಬೇಕಿದೆ. ಇದರಿಂದ ನೊಮದವರ ಹೆಸರಲ್ಲಿ ಬೇರೆಯವರು ಪರಿಹಾರ ಲಪಟಾಯಿಸುವುದನ್ನು ತಪ್ಪಿಸ ಬಹುದು. ಸ್ಥಳೀಯ ತಥಾಕಥಿತ ಮುಖಂಡರೆಂದು ಹೇಳಿಕೊಳ್ಳುವ ವಂಚಕರು, ಏಜೆಂಟರು ಪರಿಹಾರ ಕೊಡಿಸುವುದಾಗಿ ನಂಬಿಸಿ, ಬಡ ಜನರ ಶೋಷಣೆ ಮಾಡುತ್ತಿದ್ದಾರೆ.

ಲಂಚ, ಭ್ರಷ್ಟಾಚಾರಕ್ಕೂ ಇದು ಕಾರಣವಾಗುತ್ತಿದೆ. ಸ್ಥಳೀಯ ಮಟ್ಟದ ಸರಕಾರಿ ಅಧಿಕಾರಿಗಳು ದಾಖಲೆಗಳ ನೆಪದಲ್ಲಿ ನೊಮದವರನ್ನು ವೃಥಾ ಅಲೆದಾಡಿಸು ತ್ತಿದ್ದಾರೆ. ಇವೆಲ್ಲಕ್ಕೂ ತಡೆ ಹಾಕಲು ಸೂಕ್ತ ಜನ ಜಾಗೃತಿ ಅತ್ಯಗತ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನೇರ ಖಾತೆಗಳಿಗೆ ಪರಿಹಾರದ ಹಣ ಜಮಾ ಆಗುವಂತಾಗ ಬೇಕು. ಇತರ ಸರಕಾರಿ ಸೇವೆಗಳ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಂತೆಯೇ ಈ ಬಗ್ಗೆಯೂ ನಿರಂತರ ಕಾರ್ಯ ಆಗಬೇಕಿದೆ.