Friday, 20th September 2024

ಬಲವಂತವಾಗಿ ಕೋಚಿಂಗ್ ಸೆಂಟರ್‌ಗಳಿಗೆ ತಳಬೇಡಿ

ಕೋಚಿಂಗ್ ಸೆಂಟರ್‌ಗಳ ಅಭ್ಯಾಸದ ಒತ್ತಡ ತಾಳಲಾರದೆ ರಾಜಸ್ಥಾನದ ಕೋಟಾದಲ್ಲಿ ಗುರುವಾರ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವರ್ಷದಲ್ಲಿ ಇದು ೨೭ನೇ ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಸರಣಿ ಆತ್ಮಹತ್ಯೆಗಳು ಆತಂಕ ಹುಟ್ಟಿಸುತ್ತಿವೆ.

ನೀಟ್, ಜೆಇಇ, ಯುಪಿಎಸ್‌ಸಿ ಸೇರಿದಂತೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಪ್ರತಿ ವರ್ಷ ಇಲ್ಲಿಯ ಕೋಚಿಂಗ್ ಸೆಂಟರ್‌ಗಳಲ್ಲಿ ದೇಶದ ಮೂಲೆಮೂಲೆಗಳಿಂದ ಸುಮಾರು ೨ ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ವರ್ಷವೊಂದರಲ್ಲಿ ಈ ಕೋಚಿಂಗ್ ವಹಿವಾಟಿನಿಂದಲೇ ಸುಮಾರು ೫ ಸಾವಿರ ಕೋಟಿ ರು. ಆದಾಯ ಬರುತ್ತಿದೆ ಎಂದರೆ ಇದರ ವ್ಯಾಪಕತೆ ಅರ್ಥ ಮಾಡಿಕೊಳ್ಳಬಹುದು. ಇಲ್ಲಿಯ ಕೆಲವು ವಿದ್ಯಾರ್ಥಿ ಗಳು ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರ ಸ್ಥಾನ ಪಡೆಯುತ್ತಿರುವುದೂ ನಿಜ.

ಹಾಗಾಗಿ ಪೋಷಕರು ಭಾರಿ ಮಹತ್ವಾಕಾಂಕ್ಷೆಯನ್ನು ಇರಿಸಿಕೊಂಡು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿ ದ್ದಾರೆ. ಹೀಗಾಗಿ ಸಹಜವಾಗಿಯೇ ಕೋಟಾದ ಕೋಚಿಂಗ್ ಕ್ಲಾಸ್‌ಗಳ ಮಧ್ಯೆ ವಿಪರೀತ ಸ್ಪರ್ಧೆ ಏರ್ಪಟ್ಟಿದೆ. ಹೆಚ್ಚಿನ ರ‍್ಯಾಂಕ್ ಗಿಟ್ಟಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ಮೇಲೆ ವಿಪರೀತ ಒತ್ತಡ ಹೇರಲಾಗುತ್ತಿದೆ. ಇನ್ನೊಂದೆಡೆ, ತಮ್ಮ ಮಕ್ಕಳ ಮೇಲೆ ಭಾರಿ ಮಹತ್ವಾಕಾಂಕ್ಷೆ ಹೊಂದಿರುವ ಪೋಷಕರು ಕೂಡ ಒತ್ತಡ ಹಾಕುತ್ತಾರೆ. ಹಾಗಾಗಿ ಸಹಜವಾಗಿಯೇ ವಿದ್ಯಾರ್ಥಿಗಳು ಅತಿಯಾದ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸನ್ನಿವೇಶ ತಪ್ಪಿಸಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ದೂರದ ರಾಜಸ್ಥಾನದ ಕೋಟಾಗೇ ಮಕ್ಕಳನ್ನು ಕಳುಹಿಸಿ ಕೊಡಬೇಕಿಲ್ಲ.

ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳ ಸಾಕಷ್ಟು ಉತ್ತಮ ಕೋಚಿಂಗ್ ಸೆಂಟರ್‌ಗಳಿವೆ. ಕೆಲವು ಕಡೆ ರಾಜ್ಯ ಸರಕಾರವೇ ಉಚಿತವಾಗಿ ಇಂಥ ಕೋಚಿಂಗ್ ಸೆಂಟರ್‌ಗಳನ್ನು ನಡೆಸುತ್ತಿವೆ. ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗದೆಯೂ ಪ್ರತಿ ವರ್ಷ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಉನ್ನತ ರ‍್ಯಾಂಕ್ ಗಿಟ್ಟಿಸಿದ ವಿದ್ಯಾರ್ಥಿಗಳು ನಮ್ಮ ಕಣ್ಣ ಮುಂದೆ ಇದ್ದಾರೆ.

ಹಾಗಾಗಿ ಪೋಷಕರು, ಕೋಟಾ ಕೋಚಿಂಗ್ ಸೆಂಟರ್‌ಗಳ ಮೋಡಿಯಿಂದ ಹೊರಬಂದು ತಮ್ಮ ಮಕ್ಕಳ ಆಸಕ್ತಿಗೆ ಸ್ಪಂದಿಸಬೇಕಿದೆ. ಬಲವಂತವಾಗಿ
ಇಂಥ ಕೋಚಿಂಗ್ ಸೆಂಟರ್‌ಗಳಿಗೆ ತಳ್ಳಿ ಮಕ್ಕಳನ್ನು ಮಾನಸಿಕವಾಗಿ ಘಾಸಿ ಗೊಳಿಸುವುದು ಸರಿಯಲ್ಲ.