Thursday, 12th December 2024

ಮುಸ್ಲಿಂ ಹುಡುಗಿಯರಿಗೆ ಪ್ರತ್ಯೇಕ ಕಾಲೇಜು: ಬೇಕಿತ್ತಾ ಈ ವಿವಾದ?

ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ ಸರಕಾರದಿಂದಲೇ ಪ್ರತ್ಯೇಕ ಕಾಲೇಜುಗಳನ್ನು ಪ್ರಾರಂಭಿಸ ಲಾಗುತ್ತದೆ ಎಂಬ ವಿಚಾರ ತೀವ್ರ ವಿವಾದ ಸೃಷ್ಟಿಸಿದೆ. ವಾಸ್ತವದಲ್ಲಿ ಇದೆಲ್ಲ ಶುರುವಾಗಿದ್ದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರ ಒಂದು ಹೇಳಿಕೆಯಿಂದ. ಇತ್ತೀಚಿನ ಹಿಜಾಬ್ ವಿವಾದವೇ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಅದು ಒಂದು ಹಂತಕ್ಕೆ ತಣ್ಣಗಾಯಿತು ಎನ್ನುವಾಗಲೇ, ಅದೇ ಎಳೆಯನ್ನು ಹಿಡಿದು ಕೊಂಡು ವಕ್ಫ್ ಮಂಡಳಿ ಅಧ್ಯಕ್ಷರು ಸಮಾರಂಭವೊಂದರಲ್ಲಿ ಮಾತನಾಡುತ್ತ, ವಕ್ ಮಂಡಳಿಗೆ ಇರುವ ಅನುದಾನದಿಂದ ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಕಾಲೇಜು ಪ್ರಾರಂಭಿಸಲಾಗುವುದು ಎಂದು ಹೇಳಿಬಿಟ್ಟರು. ಉದ್ದೇಶಪೂರ್ವಕವೋ ಅಲ್ಲವೋ ತಿಳಿಯದು. ಆದರೆ ವಿವಾದದ ಕಿಡಿ ಹೊತ್ತಿಕೊಳ್ಳಲು ಈ ಹೇಳಿಕೆ ಸಾಕಾಯಿತು. ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳೇನೋ ಸರಿ.

ಆದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳು, ಅದೂ ರಾಜ್ಯದ ಬಿಜೆಪಿ ಸರಕಾರದ ವತಿಯಿಂದ ಎಂಬಂತಹ ವ್ಯಾಖ್ಯಾನಗಳು ಕೇಳಿಬಂದವು. ಇದರಿಂದ ಕೆರಳಿದ ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡುವುದಾಗಿ ಘೋಷಿಸಿದಾಗ ಸರಕಾರಕ್ಕೆ ನಿಜವಾದ ಬಿಸಿ ತಟ್ಟಿತು. ಸರಕಾರದ ಚುಕ್ಕಾಣಿ ಹಿಡಿದವರ ಧೋರಣೆಗೆ ತಕ್ಕಂತೆ ವಕ್ಫ್ ಮಂಡಳಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ ಎಂಬ ಸಂದೇಹಗಳು ಸೃಷ್ಟಿಯಾದವು.

ಈಗ ಬೆಚ್ಚಿಬಿದ್ದ ಸರಕಾರ ಅಂತಹ ಯಾವುದೇ ಯೋಜನೆ ಇಲ್ಲ ಎಂದು ಹೇಳಿ ತಿಪ್ಪೆ ಸಾರಿಸಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿ ನಿಂದಲೂ ಅಥವಾ ಅದಕ್ಕೂ ಪೂರ್ವದಲ್ಲೇ ಭಾರತದ ಮುಸ್ಲಿಮರನ್ನು ಸಮಾಜದ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿಯೇ ಇರಿಸಲಾಯಿತು. ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಕಟ್ಟಿ ಬಹುತೇಕ ಎಲ್ಲ ಸರಕಾರಗಳು ವೋಟ್‌ಬ್ಯಾಂಕ್ ತುಷ್ಟೀಕರಣ ಮಾಡಲಾರಂಭಿಸಿದವು.

ಇವೆಲ್ಲದರ ಪರಿಣಾಮವೇ ಇಂದು ಭಾರತದ ಮುಸ್ಲಿಂ ಸಮುದಾಯದ ಬಹುದೊಡ್ಡ ಜನಸಂಖ್ಯೆ ಇಲ್ಲಿನ ಮುಖ್ಯಧಾರೆಯೊಂದಿಗೆ ಗುರುತಿಸಿಕೊಳ್ಳದೇ ಇರುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ರಾಜಕೀಯ ದುರ್ಲಾಭಕ್ಕಾಗಿ ಹುಟ್ಟುಹಾಕಿ ಬೆಳೆಸಿಕೊಂಡು ಬಂದ ಓಲೈಕೆ ನೀತಿ ಗಳು ಸಾಮಾಜಿಕವಾಗಿ ಬಹುದೊಡ್ಡ ಕಂದಕವನ್ನೇ ಸೃಷ್ಟಿಸುವಂತಾಗಿದೆ. ಕಾಂಗ್ರೆಸ್ ಪಕ್ಷವೇನೋ ಬಹಿರಂಗ ವಾಗಿಯೇ ತುಷ್ಟೀಕರಣ ನೀತಿ ಅನುಸರಿಸುತ್ತ ಬಂದಿದೆ; ಬಿಜೆಪಿ ಅದನ್ನು ವಿರೋಧಿಸುತ್ತ ಹಿಂದೂ ಶಕ್ತಿಗಳನ್ನು ಒಗ್ಗೂಡಿಸಿ ಬೆಳೆಯುತ್ತಿದೆ.

ಹಾಗಿದ್ದರೂ ರಾಜ್ಯದ ಬಿಜೆಪಿ ಸರಕಾರ ಇಂತಹದೊಂದು ವಿವಾದ ಹುಟ್ಟಿಕೊಳ್ಳಲು ಬಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.