ಪಂಚ ರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಈ ಕುರಿತು ಕಾಂಗ್ರೆಸ್ ಕಾರ್ಯ ಕಾರಿಣಿ (ಸಿಡಬ್ಲ್ಯುಸಿ) ಸಭೆಯೂ ನಡೆದಿದೆ. ಸೋನಿಯಾ ರಾಜೀನಾಮೆ ಕೊಡಲು ಮುಂದಾದರೂ ಸಿಡಬ್ಲ್ಯುಸಿ ಅದನ್ನು ತಿರಸ್ಕರಿಸಿದ್ದು, ಯಥಾಸ್ಥಿತಿಯೇ ಮುಂದುವರಿಯುವ ಸಾಧ್ಯತೆ ಇದೆ.
ಅತಿ ದೀರ್ಘಕಾಲ ದೇಶವನ್ನು ಆಳಿರುವ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಈಗ ಅಧಿಕೃತ ಪ್ರತಿಪಕ್ಷದ ಸ್ಥಾನವನ್ನು ಪಡೆಯುವಷ್ಟು ಸದಸ್ಯ ಬಲವೂ ಇಲ್ಲ. ಗೆಲ್ಲಬೇಕು, ಅಧಿಕಾರ ಹಿಡಿಯಬೇಕು ಎಂಬ ಹುರುಪು ಪಕ್ಷದಲ್ಲಿ ಕಾಣಿಸುತ್ತಲೇ ಇಲ್ಲ. ರಾಜ್ಯಗಳಲ್ಲಿ ಗೆದ್ದರೂ ಶಾಸಕರನ್ನು ಹಿಡಿದಿಟ್ಟುಕೊಂಡು ಸರಕಾರ ಉಳಿಸಿಕೊಳ್ಳಬೇಕು ಎಂಬ ಛಲವೂ ಇಲ್ಲ. ಗೆಲ್ಲುವುದೇ ಬೇಕಿಲ್ಲದ ಪಕ್ಷಕ್ಕೆ ಮತದಾರ ಏಕೆ ಮತ ಹಾಕುತ್ತಾನೆ? ಬಿಜೆಪಿಯ ನಂತರ ಕಾಂಗ್ರೆಸ್ ಈ ದೇಶದ ಅತ್ಯಂತ ದೊಡ್ಡ ಪಕ್ಷ. ಆ ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಶೇ.20ರಷ್ಟು ಮತ ಗಳಿಕೆಯೂ ಇದೆ.
ಆದರೆ, ಸತತ ಸೋಲಿನ ಹೊಡೆತ ಪಕ್ಷವನ್ನು ಕುಗ್ಗಿಸಿದೆ. ಭೂತ ಕಾಲದ ಹೊರೆ, ವರ್ತಮಾನದ ಕುಸಿತವು ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಮಂಕಾಗಿಸಿವೆ. ಮತದಾರರ ಮನಗೆಲ್ಲುವ ಚಾಕಚಕ್ಯತೆ ಕಾಣಿಸುತ್ತಿಲ್ಲ. ಒಳಜಗಳಕ್ಕೆ ಪರ್ಯಾಯ ಪದವೇ ಕಾಂಗ್ರೆಸ್ ಎಂಬ ಸ್ಥಿತಿಯೂ ಇದೆ. ಇಂತಹ ಸ್ಥಿತಿಯಲ್ಲಿ ಪ್ರಬಲ ಪ್ರತಿಪಕ್ಷವಾಗಿ ಕಾಂಗ್ರೆಸ್ ಅನ್ನು ದೇಶವು ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಪರ್ಯಾಯ ನಾಯಕತ್ವ ಸೃಷ್ಟಿ ಅನಿವಾರ್ಯವೇ ಆಗಿದೆ.
ಆದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗಿಂತ ಹೆಚ್ಚು ಜನಪ್ರಿಯತೆ ಇರುವ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಇzರೆಯೇ? ಇದು ಕಾಂಗ್ರೆಸ್‌ನ ಮುಖ್ಯ ದ್ವಂದ್ವಗಳಲ್ಲಿ ಒಂದು. ಗಾಂಧಿ ಕುಟುಂಬದ ಸುತ್ತ ಗಿರಕಿ ಹೊಡೆಯುವ ಮುಖಂಡರು ನೆಲವಾಸ್ತವ ಏನು ಎಂಬುದು ಆ ಕುಟುಂಬಕ್ಕೆ ತಿಳಿಯದಂತೆ ನೋಡಿಕೊಂಡು ಬರುತ್ತಿದ್ದಾರೆ.
ತಹ ಬಹುತೇಕ ಮುಖಂಡರು ಜನರ ಜತೆಗೆ ಯಾವ ಸಂಬಂಧವನ್ನೂ ಹೊಂದಿಲ್ಲ. ಕಾಂಗ್ರೆಸ್‌ನ ನಿರ್ಧಾರಗಳನ್ನು ಕೈಗೊಳ್ಳುವ ಪ್ರಮುಖ ರಲ್ಲಿ ಹೆಚ್ಚಿನವರಿಗೆ ಚುನಾವಣೆಗೆ ನಿಲ್ಲುವ ಉಮೇದು ಕೂಡ ಇಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಪರ್ಯಾಯ ನಾಯಕರ ಕೊರತೆಯೂ ಎದುರಾಗಿದೆ.