ಸ್ವಾತಂತ್ರ್ಯ ಪೂರ್ವ ಪಕ್ಷ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ ಇತ್ತೀಚಿನ ದಿನದಲ್ಲಿ ಆಗುತ್ತಿರುವ ಬೆಳೆವಣಿಗೆಗಳು ಆ ಪಕ್ಷದ ಅಭಿವೃದ್ಧಿಗೆ ಪೂರಕವಾಗಿಲ್ಲ. ಸೋನಿಯಾ ಗಾಂಧಿ ಅವರ ನಂತರ ಪಕ್ಷದ ಚುಕ್ಕಾಣಿ ಹಿಡಿದ ರಾಹುಲ್ ಗಾಂಧಿ ಅವರು, ಪ್ರತಿ ಚುನಾವಣೆಯಲ್ಲಿಯೂ ಸಾವಿರಾರು ಕಿ.ಮೀ ಓಡಾಡು ತ್ತಿದ್ದಾರೆ.
ಆದರೆ ಅದ್ಯಾವುದು ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ. ಆದ್ದರಿಂದ ಸೋನಿಯಾ ಗಾಂಧಿ ಅವರು ಪುನಃ ಅಧ್ಯಕ್ಷೆಯಾಗಿದ್ದಾರೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ದಶಕಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್‌ಗೆ ಈಗ, ತಮ್ಮ ನಾಯಕರುಗಳ ಮೇಲೆಯೇ ಹಿಡಿತವಿಲ್ಲವಾಗಿದೆ. ಇದನ್ನು ಅರಿತ ಅನೇಕ ಯುವ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಅಥವಾ ಇತರ ಪಕ್ಷಗಳಿಗೆ ವಲಸೆ ಹೋಗುತ್ತಿದ್ದಾರೆ.
ಇನ್ನು ಎರಡು ದಿನದ ಹಿಂದಷ್ಟೇ, ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾ.ಅಮರೀಂದರ್ ಸಿಂಗ್ ರಾಜೀನಾಮೆ ನೀಡುವುದಷ್ಟೇ ಅಲ್ಲ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಅವಮಾನ ಗೊಂಡು ರಾಜೀ ನಾಮೆ ನೀಡುತ್ತಿದ್ದೇನೆ’ ಎನ್ನುವ ಮಾತನ್ನು ಹೇಳಿದ್ದಾರೆ.
ಕಾಂಗ್ರೆಸ್ ಕೈನಲ್ಲಿ ಬಾಕಿಯಿರುವ ಕೆಲವೇ ಕೆಲವು ರಾಜ್ಯಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಕಾಂಗ್ರೆಸ್ ಯಿದೆ. ಈ ಹಂತದಲ್ಲಿ ಇನ್ನು ನಾಲ್ಕೈದು ತಿಂಗಳಲ್ಲಿ ಪಂಜಾಬ್ ನಲ್ಲಿ ಎದುರಾಗಲಿರುವ ಚುನಾವಣಾ ಸಮಯದಲ್ಲಿ ಅಮರೀಂದರ್ ಸಿಂಗ್ ಅವರ ಈ ಹೇಳಿಕೆ ಹಾಗೂ ನಡೆ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಪಂಜಾಬ್‌ನಲ್ಲಿ ಅಮರೀಂದರ್ ಜನರಿಗೆ ಹತ್ತಿರವಾಗಿದ್ದಾರೆ. ಆದರೆ ಸಿಧು ಆಗ್ಗಾಗೆ ಪಾಕಿಸ್ತಾನ ಪರ ಹೇಳಿಕೆ ನೀಡುವ ಮೂಲಕ, ಈಗಾಗಲೇ ಪಂಜಾಬ್ ಹಾಗೂ ರಾಷ್ಟ್ರದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೀಗಿರುವಾಗ, ಅಮರೀಂದರ್ ಸಿಂಗ್ ಪರವಾಗಿ ನಿಲ್ಲಬೇಕಿದ್ದ ಕೈ ನಾಯಕರು ಸಿಧು ಪರವಾಗಿ ಬ್ಯಾಟ್ ಬೀಸಿರುವುದು ಪಕ್ಷಕ್ಕೆ ಮಾರಕವಾಗುವ ಸಾಧ್ಯತೆಯಿದೆ. ಆದ್ದರಿಂದ ಇನ್ನಾದರೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಿದೆ.