Thursday, 12th December 2024

ನಕ್ಸಲರ ಅಟ್ಟಹಾಸಕ್ಕೆಂದು ಕೊನೆ?

ದೇಶದಲ್ಲಿ ಮತ್ತೊಂದು ನಕ್ಸಲರ ದಾಳಿ ನಡೆದಿದೆ. ಛತ್ತೀಸ್ಗಢದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಇದರಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಆದರೆ ಈ ದಾಳಿ ಕೇವಲ ಸೇನೆ ಹಾಗೂ ನಕ್ಸಲರ ನಡುವಿನ ದಾಳಿ ಎನ್ನುವುದಕ್ಕೆ ಮಾತ್ರ ಸೀಮಿತಗೊಳಿಸದೇ, ದೇಶದ ಆಂತರಿಕ ಭದ್ರತಾ ಲೋಪದ ಬಗ್ಗೆಯೂ ಗಂಭೀರ ಚಿಂತನೆ ನಡೆಸಬೇಕಿದೆ.

ಭಾರತ ತನ್ನದೇಯಾದ ಬಲಿಷ್ಠ ಗುಪ್ತಚರ ದಳವನ್ನು ಹೊಂದಿದೆ ಎಂದು ಆಗಿಂದಾಗ್ಗೆ ಹೇಳಲಾಗುತ್ತದೆ. ದೇಶದ ಹೊರಭಾಗದಲ್ಲಿ ಮಾತ್ರವಲ್ಲದೇ, ಆಂತರಿಕವಾಗಿ ಏನೇನು ನಡೆಯುತ್ತಿದೆ ಎನ್ನುವ ಚಟುವಟಿಕೆಯ ಮೇಲೆ ಕಣ್ಣಿಡುವಲ್ಲಿ ಈ ದಳ ಮಹತ್ವದ ಮಾತ್ರ ವಹಿಸುತ್ತದೆ. ಆದರೆ ಶನಿವಾರದ ನಕ್ಸಲರ ದಾಳಿಯ ವೇಳೆ ಗುಪ್ತಚರ ಇಲಾಖೆ ವರದಿಯ ವೈಫಲ್ಯವಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಪ್ರಮುಖವಾಗಿ ನಕ್ಸಲರ ದಳದ ಮುಖ್ಯಸ್ಥ ಹಿದ್ಮಾ ಅವರು ಛತೀಸ್‌ಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಗೆ ಬಂದಿದ್ದಾರೆ ಎನ್ನುವ ಮಾಹಿತಿಯನ್ನು ಆಧರಿಸಿ, ಈ ಕಾರ್ಯಚರಣೆ ನಡೆದಿದೆ. ಆದರೆ ನಕ್ಸಲರು ಯೋಧರ ವಿರುದ್ಧ ದಾಳಿ ನಡೆಸಬೇಕು ಎನ್ನುವ ಕಾರಣಕ್ಕೆ ಈ ರೀತಿಯ ಸುಳ್ಳುಸುದ್ದಿಯನ್ನು ಹಬ್ಬಿಸಿ, ದಿಕ್ಕುತಪ್ಪಿಸುವ ಕೆಲಸವನ್ನು ಮಾಡಿದ್ದಾರೆ. ಈ ಮಾಹಿತಿಯನ್ನು ಗ್ರಹಿಸುವಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಅನುಭವಿಸಿದೆ.

ಇನ್ನು ಈ ಬಾರಿಯ ದಾಳಿಯಲ್ಲಿ ನಕ್ಸಲರು ಲೈಟ್ ಮೆಷಿನ್ ಗನ್, ಐಇಡಿಗಳನ್ನು ಬಳಸಿದ್ದಾರೆ ಎನ್ನುವ ಅನುಮಾನವನ್ನು ಹೊರಹಾಕಲಾಗಿದೆ. ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೇನೆಂದರೆ, ಬಹುತೇಕ ನಕ್ಸಲರ ದಾಳಿಯ ವೇಳೆ ಗುಪ್ತಚರ ಇಲಾಖೆಯ ವೈಫಲ್ಯವನ್ನು ನಾವು ಗಮನಿಸಬಹುದು. ಆದ್ದರಿಂದ ದೇಶದ ಬಹುಭಾಗದಲ್ಲಿ ನಕ್ಸಲರು ತಮ್ಮ ಶಕ್ತಿಯನ್ನು ಕಳೆದುಕೊಂಡಿ ದ್ದಾರೆ.

ಆದರೆ ಛತ್ತೀಸ್‌ಗಢದಲ್ಲಿ ಮಾತ್ರ ಇದಕ್ಕೆ ಕೊನೆಯಾಗಿಲ್ಲ. ಆದ್ದರಿಂದ ಕೇಂದ್ರ ಗೃಹ ಇಲಾಖೆ ನಕ್ಸಲರ ಅಟ್ಟಹಾಸವನ್ನು ಕೊನೆ ಗಾಣಿಸುವ ಜತೆಗೆ, ಗುಪ್ತಚರ ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸುವ ಪ್ರಯತ್ನ ಮಾಡಬೇಕಿದೆ.