Saturday, 14th December 2024

ವಿವಾದಾತ್ಮಕ ಹೇಳಿಕೆಗಳಿಗೆ ಕಡಿವಾಣ ಹಾಕಿ

ರಾಜಕಾರಣಿಗಳ ವಿವಾದಾತ್ಮಕ ಹೇಳಿಕೆಗಳು ರಾಜ್ಯದಲ್ಲಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕವಾಗಿ ಅನಗತ್ಯ ಘರ್ಷಣೆಗಳಿಗೆ
ಕಾರಣವಾಗುತ್ತಿವೆ. ಹಿಜಾಬ್ ವಿಚಾರವಾಗಿ ಪ್ರಾರಂಭಗೊಂಡ ವಿವಾದಾತ್ಮಕ ಹೇಳಿಕೆ ಗಳು ನಂತರದ ದಿನಗಳಲ್ಲಿ ರಾಷ್ಟ್ರಧ್ವಜದವರೆಗೂ ತಲುಪಿತು.

ತಮ್ಮ ತಮ್ಮ ಪಕ್ಷಗಳ ಸಿದ್ಧಾಂತಕ್ಕನುಗುಣವಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಹೇಳಿಕೆಗಳನ್ನು ನಿತ್ಯ ನೀಡುತ್ತಲೇ ಇರುವುದರಿಂದ ಸಮಾಜದಲ್ಲಿ ಸಾಮರಸ್ಯ ಹಾಳಾ ಗುತ್ತಿದೆ. ‘ನಾಲಿಗೆ ಸೀಳುತ್ತೇವೆ’, ‘ಕತ್ತರಿಸಿ ಹಾಕುತ್ತೇವೆ’, ‘ದೇಶ ಬಿಟ್ಟು ಹೊರಗೆ ಹಾಕುತ್ತೇವೆ’ ಎಂಬ ಮಾತುಗಳು ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಬಾಯಲ್ಲೂ ರಾರಾಜಿಸುತ್ತಿವೆ. ಅವರ ಇಂಥ ಹೇಳಿಕೆಗಳು ಕೊಲೆ, ಘರ್ಷಣೆ, ದೊಂಬಿಗಳಿಗೆ ಕಾರಣವಾಗುತ್ತಿದೆ. ನಿಜವಾಗಿಯೂ ರಾಜಕಾರಣಿಗಳು ಮಾತನಾಡಬೇಕಿರುವುದು ಸದನದ ಒಳಗೆ. ಆದರೆ ಸದನದಲ್ಲಿ ಯಾರೊಬ್ಬರೂ ಮಾತನಾಡುತ್ತಿಲ್ಲ, ಮಾತನಾಡ ಬೇಕೆಂದವರಿಗೆ ಅವಕಾಶ ಕೊಡುತ್ತಿಲ್ಲ.

ಕನಿಷ್ಠ ಪಕ್ಷ ರಾಜಕಾರಣಿಗಳು ಸದನದ ಹೊರಗೆ ನೀಡುವ ವೈಯಕ್ತಿಕ ಹೇಳಿಕೆಗಳಿಂದ ಉದ್ಭವವಾಗುವ ವಿವಾದಗಳ ಬಗ್ಗೆಯಾದರೂ ಶಾಸನಸಭೆಗಳಲ್ಲಿ ಚರ್ಚೆಯಾಗಬೇಕು. ಅದರ ಮೂಲಕವೇ ಇಂಥ ವಿವಾದಗಳನ್ನು ಪರಿಹರಿಸಿಕೊಳ್ಳುವಂತೆ ಆಗಬೇಕು. ಆಗ ಆರೋಪ, ಪ್ರತ್ಯಾರೋಪ, ಸಮರ್ಥನೆ, ಕ್ಷಮೆ ಯಾಚನೆಯಂಥ ಅನಗತ್ಯವಾದ ನಾಟಕೀಯ ಬೆಳವಣಿಗೆಗಳು ಮಾಧ್ಯಮಗಳ ಮುಖಾಂತರ ಯುವಜನರನ್ನು ತಲುಪುವುದು, ಅದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದು ತಪ್ಪುತ್ತದೆ.

ಪಕ್ಷಗಳ ರಾಷ್ಟ್ರೀಯ ಮುಖಂಡರು ಭಾವನಾತ್ಮಕ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದು ತಮ್ಮ ಪಕ್ಷದ ನಾಯಕರಿಗೆ ಸೂಚಿಸ ಬೇಕು. ಯುವಜನರು ಕೂಡ ರಾಜಕೀಯ ನಾಯಕರ ಇಂಥ ಪ್ರಚೋದನಾಕಾರಿ ಮಾತುಗಳಿಗೆ ಕಿವಿಯಾಗಿ ಕಾನೂನು ಕೈಗೆತ್ತಿಕೊಳ್ಳುವ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು.