Sunday, 15th December 2024

ಅಡುಗೆ ಅನಿಲ ಸುರಕ್ಷತೆ: ಜಾಗೃತಿ ಅಗತ್ಯ

ಅಡುಗೆ ಅನಿಲ ಸೋರಿಕೆ, ಸಿಲಿಂಡರ್ ಸ್ಫೋಟದಂತಹ ವರದಿಗಳು ನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇವೆ. ಸಿಲಿಂಡರ್ ಸೋಟಗೊಂಡ ಸಂದರ್ಭದಲ್ಲಿ ಅನೇಕ ಪ್ರಾಣ ಹಾನಿಗಳೂ ಸಂಭವಿಸಿವೆ.

ಬಹುತೇಕ ಸಂದರ್ಭಗಳಲ್ಲಿ ಜನರ ಅಜಾಗರೂಕತೆಯಿಂದಾಗಿ ದುರ್ಘಟನೆಗಳು ನಡೆಯುತ್ತಿವೆ. ಸಿಲಿಂಡರ್, ಸ್ಟೌ, ರೆಗ್ಯುಲೇಟರ್, ಅನಿಲ ಪೈಪ್‌ಗಳ ಬಳಕೆ, ಸುರಕ್ಷತೆ ಬಗ್ಗೆ ಸರಕಾರ, ಅಡುಗೆ ಅನಿಲ ವಿತರಕ ಕಂಪನಿಗಳು, ಏಜೆನ್ಸಿಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ಜನರು ಪೂರ್ಣವಾಗಿ ಜಾಗೃತರಾಗಿಲ್ಲ. ಕೆಲವು ಸಂದರ್ಭದಲ್ಲಿ ವಿತರಕ ಏಜೆನ್ಸಿಗಳು ಉದಾಸೀನ ಪ್ರವೃತ್ತಿ ತೋರುವುದೂ ಇದೆ. ಅಡುಗೆ ಅನಿಲ ಬಳಸುವ ಸಂದರ್ಭದಲ್ಲಿ ಗ್ರಾಹಕರು ಸುರಕ್ಷತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

ಇದರ ಬಗ್ಗೆ ಜಾಗೃತಿ ಮೂಡಿಸುವ ಹೊಣೆಗಾರಿಕೆಯೂ ಏಜೆನ್ಸಿಗಳ ಮೇಲಿದೆ. ಕೆಲವು ಕಡೆಗಳಲ್ಲಿ ಜಾಗೃತಿ ಕಾರ್ಯ ಪರಿಣಾಮಕಾರಿ ಆದರೆ, ಇನ್ನೂ ಕೆಲವು ಕಡೆಗಳಲ್ಲಿ ಆಗುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಿ ಜನರಿಗೆ ಇನ್ನೂ ಇವುಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಏಜೆನ್ಸಿಗಳ ಸಿಬ್ಬಂದಿ, ಕಂಪನಿ ಗಳ ತಜ್ಞರು ಬಂದು ಹೇಳಿದರೂ, ಅವುಗಳನ್ನು ಅನುಷ್ಠಾನಗೊಳಿಸುವುದಿಲ್ಲ. ನಿಯಮಗಳ ಪ್ರಕಾರ, ಮನೆಗೆ ಸಿಲಿಂಡರ್‌ಗಳನ್ನು ನೀಡುವಾಗ ವಿತರಕರು, ಅನಿಲ ಸೋರಿಕೆ ಇದೆಯೇ ಎಂಬುದನ್ನು ಪರಿಶೀಲಿಸಿಯೇ ನೀಡಬೇಕು. ಕೆಲವರು ಪರಿಶೀಲನೆ ನಡೆಸಿದರೆ ಇನ್ನೂ ಕೆಲವರು ಮಾಡುತ್ತಿಲ್ಲ.

ಬಹುತೇಕ ಕಡೆಗಳಲ್ಲಿ ಸಿಲಿಂಡರ್‌ನಿಂದ ಸ್ಟೌಗೆ ಅನಿಲ ಸಂಪರ್ಕಿಸುವ ಪೈಪ್‌ನಿಂದ ಅನಿಲ ಸೋರಿಕೆಯಾಗಿ ದುರಂತ ಸಂಭವಿಸುತ್ತದೆ. ವಿತರಕ ಕಂಪನಿಗಳ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಪೈಪ್ ಬದಲಾಯಿಸಬೇಕು. ಕೆಲವು ಏಜೆನ್ಸಿಗಳ ಮಾಲೀಕರು, ಮೂರು ವರ್ಷಕ್ಕೊಮ್ಮೆ ಪೈಪ್
ಬದಲಾಯಿಸುವುದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ, ಕೆಲವು ಗ್ರಾಹಕರು ೨೦೦-೩೦೦ ರು. ಉಳಿಸುವ ಉದ್ದೇಶದಿಂದ ಏಳೆಂಟು ವರ್ಷಗಳಾದರೂ ಪೈಪ್ ಬದಲಾಯಿಸಲು ಹೋಗುವುದಿಲ್ಲ. ಆದ್ದರಿಂದ ಏಜೆನ್ಸಿಗಳ ಸಿಬ್ಬಂದಿ ಗ್ರಾಮೀಣ ಭಾಗ,
ಶಾಲಾ ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಸುರಕ್ಷತಾ ನಿಯಮಗಳ ಪಾಲನೆ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಬೇಕಿದೆ. ಆ
ಮೂಲಕ ಅಪಘಾತಗಳನ್ನು ತಡೆಯಬೇಕಿದೆ.