ಕರೋನಾ ಎರಡನೆಯ ಅಲೆ ಹೆಚ್ಚುತ್ತಿರುವ ವೇಗ ಹಲವು ದೇಶಗಳನ್ನು ಆತಂಕಕ್ಕೀಡಾಗಿಸಿದೆ. ಸಾವಿನ ಪ್ರಮಾಣ ಕಡಿಮೆ ಯಾಗಿದ್ದರೂ ಹರಡುತ್ತಿರುವ ವೇಗಕ್ಕೆ ನಿಯಂತ್ರಣ ಒಡ್ಡುವುದು ಸವಾಲಿನ ಸಂಗತಿಯಾಗಿ ಪರಿಣಮಿಸಿದೆ.
ಭಾರತದಲ್ಲಿ ೬.೮೭ ಕೋಟಿ ಲಸಿಕೆಯನ್ನು ನೀಡಿರುವುದು ಮಹತ್ವದ ಬೆಳವಣಿಗೆ. ಜತೆಗೆ ಶುಕ್ರವಾರ ಬೆಳಗ್ಗೆ ೭ ಗಂಟೆ ಒಳಗೆ ಒಂದೇ ದಿನ ೨೪ ಗಂಟೆ ಅವಧಿಯಲ್ಲಿ ೩೬.೭ ಲಕ್ಷ ಡೋಸ್ ಲಸಿಕೆ ವಿತರಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳು ಸರಕಾರದ
ಕಾರ್ಯವೈಖರಿಗೆ ಸಾಕ್ಷಿ. ಜತೆಗೆ ಕರೋನಾ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಹೋರಾಡುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗಾಗಿ ವಿಶೇಷ ವೀಸಾ ಒದಗಿಸುವ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
ವಿಶೇಷ ವೀಸಾ ನೀಡುವುದರಿಂದ ತುರ್ತು ಅಗತ್ಯವಿದ್ದಲ್ಲಿ ಕೋರಿಕೆಯ ಮೇರೆಗೆ ಹೆಲ್ತ ಕೇರ್ ಸಿಬ್ಬಂದಿ ಸುಲಭವಾಗಿ
ಪ್ರಯಾಣಿಸಲು ಸಾಧ್ಯವಾಗಬಹುದು ಎಂಬ ಕಾರಣಕ್ಕಾಗಿ ಪ್ರಧಾನಿಯವರು ಪ್ರಾದೇಶಿಕ ಏರ್ ಆಂಬುಲೆನ್ಸ್ ಒದಗಿಸುವ ಬಗ್ಗೆಯೂ ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ನೆರೆ ರಾಷ್ಟ್ರಗಳ ಬಳಿ ಪ್ರಸ್ತಾಪಿಸಿದ್ದಾರೆ. ಕರೋನಾ ನಿಯಂತ್ರಣಕ್ಕಾಗಿ ರಾಜ್ಯ, ದೇಶಗಳಂತೆಯೇ ವಿಶ್ವಮಟ್ಟದಲ್ಲೂ ಬಹಳಷ್ಟು ವಿಷಯಗಳು ಚರ್ಚೆಗೊಳ್ಳುತ್ತಿವೆ.
ಇವುಗಳಲ್ಲಿ ಪ್ರಮುಖವಾದ ವಿಚಾರ ಸಾಂಕ್ರಾಮಿಕ ಒಪ್ಪಂದ. ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಎಲ್ಲ ದೇಶಗಳು ಒಗ್ಗೂಡಿ ‘ಸಾಂಕ್ರಾಮಿಕ ಒಪ್ಪಂದ’ ರೂಪಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಇದೊಂದು ಮಹತ್ವದ ಬೆಳವಣಿಗೆ. ನಾನಾ ರಾಷ್ಟ್ರಗಳು ಸಾಂಕ್ರಾಮಿಕ ರೋಗಗಳು ಸೃಷ್ಟಿಸುವ ಸಂದಿಗ್ಧ ಸಂದರ್ಭದಲ್ಲಿ ದ್ವೇಷ ಮರೆತು ಒಗ್ಗೂಡಿ ಕಾರ್ಯನಿರ್ವಹಿಸುವುದು ಒಪ್ಪಂದದ ಮುಖ್ಯ ಉದ್ದೇಶ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಜರ್ಮನಿ ಚಾನ್ಸೆಲರ್ ಅಂಜೆಲಾ ಮರ್ಕೆಲ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಸೇರಿದಂತೆ ೨೦ಕ್ಕೂ ಹೆಚ್ಚು ದೇಶಗಳ ನಾಯಕರು ಈ ಒಪ್ಪಂದದ ಬಗ್ಗೆ ಆಸಕ್ತಿತೋರಿದ್ದಾರೆ. ಪ್ರಸ್ತುತ ಹೊಸ ಹೊಸ ಸಂಕ್ರಾಮಿಕಗಳು ಹಲವು
ದೇಶಗಳನ್ನು ಕಂಗೆಡಿಸುತ್ತಿರುವ ವೇಳೆಯಲ್ಲಿ ಇಂಥದೊಂದು ಒಪ್ಪಂದ ಅಗತ್ಯ ಮಾತ್ರವಲ್ಲ, ಅನಿವಾರ್ಯವೂ ಆಗಿದೆ.