ರಾಜ್ಯದಲ್ಲೀಗ ಗ್ಯಾರಂಟಿಗಳನ್ನೂ ಮೀರಿ ಸದ್ದು ಮಾಡುತ್ತಿರುವುದು ‘ವರ್ಗಾವಣೆ ದಂಧೆ’ ಯ ಆರೋಪ. ಸಾಮಾನ್ಯವಾಗಿ ಹೊಸ ಸರಕಾರಗಳು ಬಂದಾಕ್ಷಣ, ಹೊಸ ಸಂಪುಟ ರಚನೆಯಾದಾಗ ತಂತಮ್ಮ ಇಲಾಖೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಬದಲಾ ಯಿಸಿ, ಅನುಕೂಲಕರ ವ್ಯಕ್ತಿಗಳನ್ನು ಆಯಕಟ್ಟಿನ ಹುದ್ದೆಗಳಿಗೆ ನೇಮಿಸಿಕೊಳ್ಳುವುದು ಸಹಜ ಪ್ರಕ್ರಿಯೆ.
ಸಮರ್ಥರು ಎಂಬ ಕಾರಣಕ್ಕೋ, ಪರಿಚಿತರು, ಹೇಳಿದಂತೆ ಕೇಳುವವರು, ಇಲಾಖೆಗೆ ಸಂಬಂಽಸಿದ ಮಾಹಿತಿ ಇದೆ…ಇತ್ಯಾದಿ ಕಾರಣಗಳಲ್ಲದೇ ಜಾತಿ, ಪ್ರದೇಶದ ಕಾರಣಗಳೂ ವರ್ಗಾವಣೆಯಲ್ಲಿ ಕೆಲಸ ಮಾಡುತ್ತವೆ. ಇನ್ನು ಕೆಲವು ವೇಳೆ ಪ್ರಭಾವಿಗಳ ಶಿಫಾರಸು, ಅಧಿಕಾರಿಗಳ ಬಗೆಗಿನ ಪೂರ್ವಗ್ರಹ, ಮಾತು ಕೇಳಿಸಲಾಗುವುದಿಲ್ಲ ಎಂಬುದಕ್ಕೂ ಎತ್ತಂಗಡಿ ಆಗುವುದಿದೆ. ಇವು ಉನ್ನತ ಅಧಿಕಾರಿಗಳ ಮಾತಾಯಿತು.
ಇನ್ನು ಸಾಮಾನ್ಯ, ಸಾರ್ವತ್ರಿಕ ವರ್ಗಾವಣೆ ಎಂಬುದು ವಾರ್ಷಿಕ ಪ್ರಕ್ರಿಯೆ. ಯಾವುದೇ ಸರಕಾರವಿದ್ದರೂ ಇದರಲ್ಲಿ ‘ವ್ಯವಹಾರ’ ಎಂಬುದು ಬಹಿರಂಗ ರಹಸ್ಯ. ಆದರೆ ಈ ಬಾರಿ ಹೊಸ ಸರಕಾರ ಅಧಿಕಾರಕ್ಕೇರುತ್ತಿರುವಾಗಲೇ ‘ವರ್ಗಾವಣೆ ಋತು’ ಸಹ ಬಂದಿರು ವುದರಿಂದ ಸರಕಾರದ ವಿರುದ್ಧ ಪ್ರತಿ ಪಕ್ಷಗಳಿಗೆ ಪ್ರಬಲ ಅಸ ಸಿಕ್ಕಂತಾಗಿದೆ. ವರ್ಗಾವಣೆಯಲ್ಲಿ ದಂಧೆ ಎಂಬುದು ಇಂದು ನಿನ್ನೆಯ ಮಾತಲ್ಲ. ಇದರ ನಿಯಂತ್ರಣಕ್ಕಾಗಿಯೇ ೨೦೧೫ರಲ್ಲಿ ವರ್ಗಾವಣೆ ಮಾರ್ಗಸೂಚಿ ಜಾರಿಗೊಳಿಸಲಾಗಿದ್ದು, ಒಂದು ಜ್ಯೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.೬ರನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ರಾಜ್ಯ ಸರಕಾರ ಅಧಿಕಾರ ನೀಡಿತ್ತು.
ಹಾಗೂ ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಮಾತ್ರ ನಡೆಸುವಂತೆ ನಿರ್ಬಂಧಿಸಲಾಗಿದೆ. ಹೀಗಿದ್ದಾಗ್ಯೂ ಸರಕಾರ ಗಳು, ಕಾಲಕಾಲಕ್ಕೆ ವರ್ಗಾವಣೆಯಲ್ಲಿ ಮಿತಿ ಹಾಗೂ ಕಾಲಮಿತಿ ಯನ್ನು ಹೇರುವ ಮತ್ತು ಅದನ್ನು ಸಡಿಲಿಸುವ ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಂಡಿವೆ. ಇದರಂತೆಯೇ ಈ ಬಾರಿ ಹಲವು ಕಾರಣಕ್ಕೆ ಅವಧಿ ವಿಸ್ತರಣೆಗೊಂಡಿದೆ. ಸೇವಾವಧಿಯ ಕನಿಷ್ಠ ವರ್ಷಗಳೂ ಅಧಿಕಾರಸ್ಥರ ಮೂಗಿನ ನೇರಕ್ಕೆ ಬದಲಾಗುತ್ತವೆ. ಹೀಗಾಗಿ ನಿರ್ದಿಷ್ಟ ವರ್ಗಾವಣೆಗಳಿಗೆ ಹಿಂದಿನ ಮಾರ್ಗಸೂಚಿಗಳ ಪೈಕಿ ಯಾವುದನ್ನು ಮಾನದಂಡವಾಗಿ ಸ್ವೀಕರಿಸಲಾಗುತ್ತದೆ ಎನ್ನುವುದು ಪ್ರಶ್ನೆಯಾಗಿ ಕಾಡುತ್ತದೆ.
ಇದೇ ಕಾರಣಕ್ಕೆ ವರ್ಗಾವಣೆ ವಿಚಾರದಲ್ಲಿ ಸರಕಾರದ ಕ್ರಮ ಆಕ್ಷೇಪಕ್ಕೆ ಒಳಗಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರಿ ನೌಕರರ ಸೇವಾ ನಿಯಮದಂತೆ ಶಾಶ್ವತ ಮಾನದಂಡವನ್ನು ನಿಗದಿಪಡಿಸಿ, ಅದನ್ನು ಮೀರಲಾಗದ ಅನಿವಾರ್ಯ ವನ್ನು ಸೃಷ್ಟಿಸುವ ಅಗತ್ಯ ಇದೆ. ಆ ಮೂಲಕ ವರ್ಗಾವಣೆ ಭ್ರಷ್ಟಾಚಾರಕ್ಕೆ ಕೊನೆ ಹಾಡಬೇಕಿದೆ.