Thursday, 12th December 2024

ಕೋವಿಡ್ ಪರಿಹಾರ ನೀಡಿ

ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸೇರಿ ದೇಶಾದ್ಯಂತ ೫ ಲಕ್ಷ ೨೫ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

ಇದರಲ್ಲಿ ೪ ಲಕ್ಷಕ್ಕೂ ಹೆಚ್ಚು ಮೃತರು ತಮ್ಮ ಕುಟುಂಬಗಳಿಗೆ ಆಧಾರಸ್ತಂಭ ವಾಗಿದ್ದರು ಎನ್ನಲಾಗಿದೆ. ಮೃತರ ಕುಟುಂಬಗಳಿಗೆ ಕೇಂದ್ರ ಸರಕಾರ ೫೦ ಸಾವಿರ ಮತ್ತು ಆಯಾ ರಾಜ್ಯ ಸರಕಾರಗಳು ಬೇರೆ ಬೇರೆ ಮೊತ್ತದ ಪರಿಹಾರವನ್ನು ಘೋಷಿಸಿದ್ದವು. ಕರ್ನಾಟಕದಲ್ಲೂ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಹೊಂದಿರುವ ಮೃತರ ಕುಟುಂಬಗಳಿಗೆ ಒಂದು ಲಕ್ಷ ರು. ಪರಿಹಾರ ಘೋಷಿಸಿದ್ದರು.

ರಾಜ್ಯ ಸರಕಾರದಿಂದ ಒಂದು ಲಕ್ಷ ರುಪಾಯಿ ಮತ್ತು ಕೇಂದ್ರ ಸರಕಾರ ದಿಂದ ೫೦ ಸಾವಿರ ರುಪಾಯಿ ಸೇರಿ ಒಟ್ಟು ೧,೫೦,೦೦೦ ರುಪಾಯಿ ಪರಿಹಾರವನ್ನು ಮೃತರ ವಾರಸುದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಒಂದು ತಿಂಗಳಲ್ಲಿ ಜಮೆಯಾಗುತ್ತದೆ ಎಂದು ಭರವಸೆ ಕೊಡಲಾಗಿತ್ತು. ಆದರೆ ಒಂದೂವರೆ ವರ್ಷ ಕಳೆದರೂ ಅನೇಕ ಕುಟುಂಬಗಳಿಗೆ ಪರಿಹಾರ ದೊರಕಿಲ್ಲ. ಕೆಲವು ಕುಟುಂಬಗಳಿಗೆ ಕೇಂದ್ರ ಸರಕಾರದ ೫೦ ಸಾವಿರ ರುಪಾಯಿ ಮಾತ್ರ ಜಮೆಯಾಗಿವೆ.

ಬಾಕಿ ಪರಿಹಾರ ಬರುತ್ತದೆಯೋ ಇಲ್ಲವೋ ಎಂಬುದನ್ನೂ ಅಽಕಾರಿಗಳು ತಿಳಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇದಕ್ಕೆ ಆರೋಗ್ಯ ಸಚಿವರು ಅಥವಾ ಮುಖ್ಯಮಂತ್ರಿಗಳು ಉತ್ತರಿಸಬೇಕಿದೆ. ಇನ್ನು ಅನೇಕ ಕುಟುಂಬಗಳು ಪರಿಹಾರಕ್ಕಾಗಿ ಯಾರಿಗೆ ಅರ್ಜಿ ಸಲ್ಲಿಸಬೇಕು ಎಂಬುದು ಗೊತ್ತಾಗದೇ ಸುಮ್ಮನಾಗಿದ್ದಾರೆ, ಗ್ರಾಮ ಲೆಕ್ಕಾಽಕಾರಿಗಳು ಕೂಡ ಸಾವಿನ
ವರದಿಯನ್ನು ಸಂಗ್ರಹಿಸಿ, ಮೃತ ಕುಟುಂಬಗಳ ಪರ ಅರ್ಜಿ ಸಲ್ಲಿಸಿಲ್ಲ.

ಹೀಗಾಗಿ ಅನೇಕ ಕುಟುಂಬಗಳು ಪರಿಹಾರದಿಂದ ವಂಚಿತವಾಗಿವೆ. ಅಂತ ಕುಟುಂಬಗಳ ಸದಸ್ಯರು ಕುಂದು ಕೊರತೆ ನಿವಾರಣಾ ಸಮಿತಿಗೆ ದೂರು ನೀಡಲು ಅವಕಾಶವಿದೆ. ಈಗಾಗಲೇ ಸಮಿತಿಗೆ ಸಾವಿರಾರೂ ದೂರುಗಳು ಬಂದಿದ್ದು, ಅವುಗಳನ್ನು ಇತ್ಯರ್ಥ ಮಾಡಲು ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕು. ಅಲ್ಲದೆ, ಕೋವಿಡ್ ಅಲೆಯಲ್ಲಿ ಅನೇಕ
ಮಕ್ಕಳು ಅನಾಥರಾಗಿದ್ದು, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರೆಲ್ಲರನ್ನು ಮತ್ತೆ ಶಾಲೆಯತ್ತ ಸೆಳೆಯಲು ವಿಶೇಷ ಯೋಜನೆಯೊಂದನ್ನು ಜಾರಿಗೊಳಿಸಬೇಕಿದೆ.