Thursday, 12th December 2024

ಕಹಿನೆನಪೇ ಆಳುಗರಿಗೆ ಪಾಠವಾಗಲಿ

ಕರ್ನಾಟಕದಲ್ಲಿ ಕೋವಿಡ್ ಮಹಾಮಾರಿ ಮತ್ತೆ ಕಾಣಿಸಿಕೊಂಡಿರುವುದರ ಜತೆಗೆ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿದೆ, ಸಾವೂ ಆರಂಭ ವಾಗಿದೆ. ಇದು ಖಂಡಿತವಾಗಿಯೂ ನಿರ್ಲಕ್ಷಿಸುವ ಸಂಗತಿಯಲ್ಲ.

ಏಕೆಂದರೆ, ಸಮಸ್ಯೆ-ಸಂಕಷ್ಟಗಳು ಬೆಳೆದು ಹೆಮ್ಮರವಾಗುವುದು ಪುಟ್ಟ ಮೊಳಕೆಯಿಂದಲೇ. ಪುಟ್ಟದಾಗಿದ್ದಾಗಲೇ ಅದರ ಮೂಲೋತ್ಪಾಟನ ಮಾಡು ವುದು ಜಾಣತನ. ಜನದಟ್ಟಣೆ ಹೆಚ್ಚಿದಷ್ಟೂ ಕೋವಿಡ್ ಸೋಂಕಿನ ಹಬ್ಬುವಿಕೆಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದಂತಾಗುತ್ತದೆ ಎಂಬುದು, ಹಿಂದೆ
ಅಪ್ಪಳಿಸಿದ್ದ ಈ ಮಹಾಮಾರಿಯ ಪಿಡುಗಿನಿಂದ ಕಲಿಯಬೇಕಿರುವ ಮರೆಯಲಾಗದ ಪಾಠ. ತರುವಾಯದಲ್ಲಿ ಅದು ಸೋಂಕಿತರ ನಿರ್ವಹಣೆ, ಚಿಕಿತ್ಸೆ, ಪ್ರತ್ಯೇಕವಾಸ ಹೀಗೆ ವಿವಿಧ ಮಗ್ಗುಲುಗಳಲ್ಲಿ ಸಮಸ್ಯೆಯನ್ನು ಹಿಗ್ಗಲಿಸುತ್ತಲೇ ಹೋಗುತ್ತದೆ ಎಂಬುದನ್ನು ಈಗಾಗಲೇ ಕಂಡಿದ್ದೇವೆ.

ಇಷ್ಟಾಗಿಯೂ ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಪ್ರಸ್ತುತ ಏರಿಕೆ ಕಂಡುಬರುತ್ತಿರುವುದರ ಹೊರತಾಗಿಯೂ, ‘ಹೊಸ ವರ್ಷದ ಸಂಭ್ರಮಾ ಚರಣೆಗೆ ನಿರ್ಬಂಧ ವಿಧಿಸುವುದಿಲ್ಲ; ನೂತನ ವರ್ಷದ ಸ್ವಾಗತಕ್ಕೆ ಯಾವುದೇ ಅಡೆತಡೆಗಳಿಲ್ಲ’ ಎಂಬ ಆಳುಗ ವಲಯದ ಹೇಳಿಕೆ ಯಾಕೋ ಸರಿಯಾಗಿದೆ ಎನಿಸುತ್ತಿಲ್ಲ. ಮಾನವ ಬದುಕಿನ ಅಸ್ತಿತ್ವವನ್ನು ಕಾಪಿಟ್ಟುಕೊಳ್ಳುವುದಕ್ಕಿಂತ ಮತ್ತು ಅದಕ್ಕೆ ಅಗತ್ಯವಾದ ರಕ್ಷಣೋಪಾಯಗಳನ್ನು ಸಜ್ಜುಗೊಳಿಸಿ ಕೊಳ್ಳುವುದಕ್ಕಿಂತ ಮಿಗಿಲಾದುದೇನಲ್ಲ ಹೊಸ ವರ್ಷದ ಸಂಭ್ರಮಾಚರಣೆ. ಜೀವ ಇದ್ದರೆ ತಾನೇ ಸಂಭ್ರಮ? ಹಾಗೆ ನೋಡಿದರೆ, ಇದು ಕ್ಷಿಪ್ರ  ಮುನ್ನೆಚ್ಚ ರಿಕಾ ಮತ್ತು ಪರಿಹಾರೋಪಾಯದ ಕ್ರಮಗಳಿಗೆ ಮುಂದಾಗಬೇಕಾದ ನಿರ್ಣಾಯಕ ಘಟ್ಟವೇ ವಿನಾ, ಅಳೆದೂಸುರಿದೂ ಪ್ರಯೋಗ ಮಾಡಿ ನಂತರ, ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಮುಂದಾಗುವಂಥ’ ನಿರ್ಲಕ್ಷ್ಯಪರ್ವವಲ್ಲ.

ಕಾರಣ, ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಮೌಲ್ಯವಿದೆ. ಯಾರದೋ ನಿರ್ಲಕ್ಷ್ಯಕ್ಕೆ, ವಿಳಂಬನೀತಿಗೆ ಜನಸಾಮಾನ್ಯರು ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುವಂತೆ ಆಗಬಾರದು. ಹಾಗೊಮ್ಮೆ ಹೊಸವರ್ಷವನ್ನು ಸ್ವಾಗತಿಸಬೇಕೆಂದಿದ್ದರೆ, ಸಂಭ್ರಮಾಚರಣೆ ಮಾಡಬೇಕೆಂದಿದ್ದರೆ, ಭಾರತೀಯರ ಪಾಲಿಗೆ ಹೊಸವರ್ಷವಾದ ‘ಯುಗಾದಿ’ಯವರೆಗೂ ಕಾಯಲು ಏನಡ್ಡಿ? ಅಲ್ಲಿಯವರೆಗೆ ಆಶ್ರಿತ ಜನರ ಜೀವಕ್ಕೆ, ಅವರ ಅಸ್ತಿತ್ವಕ್ಕೆ ಸಂಚಕಾರ ಬರದಂತೆ ನೋಡಿಕೊಳ್ಳಬೇಕಾದ್ದು ಆಳುಗರ ಹೊಣೆ. ಇದರಲ್ಲಿ ಅಸಡ್ಡೆ ಸಲ್ಲ.