Wednesday, 11th December 2024

ನಿಯಮ ಕಂಟಕವಾಗದಿರಲಿ

ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಸ್ಫೋಟಗೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಾದಯಾತ್ರೆಯನ್ನು ಹಿಂಪಡೆದಿರುವ ನಿರ್ಧಾರ ಸ್ವಾಗತಾರ್ಹ. ಬೆನ್ನಲ್ಲೇ ಮುಖ್ಯಮಂತ್ರಿ ಮೇಕೆದಾಟುವಿಗೆ ಪ್ರಾಮಾಣಿಕವಾಗಿ ಎಲ್ಲರ ವಿಶ್ವಾಸ ಪಡೆದು ಅನುಷ್ಠಾನಗೊಳಿಸ ಲಾಗುವುದು ಎಂದು ಹೇಳಿರುವುದು ಸೂಕ್ತವಾಗಿದೆ. ಈಗ ಮಾಡಬೇಕಿರುವುದು ಕರೋನಾ ನಿಯಂತ್ರಣ.

ಸರಕಾರವೇನೋ ಕರೋನಾ ನಿಯಂತ್ರಣಕ್ಕಾಗಿ ಕಠಿಣ ಲಾಕ್ ಡೌನ್ ಹೇರಿದರೆ ಹಣವಂತರೂ ಹೇಗೋ ಜೀವನ ನಡೆಸುತ್ತಾರೆ. ಆದರೆ ಜನಸಾಮಾನ್ಯರು ಬೀದಿಗೆ ಬರಬೇಕಾಗುತ್ತದೆ. ಸರಕಾರ ಮೊದಲು ಇಂತಹ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕರೋನಾ ಮೊದಲನೇ ಹಾಗೂ 2ನೇ ಅಲೆಯಲ್ಲಿ ಆಗಿರುವ ಅನಾಹುತಗಳೇ ಸಾಕು. ೩ನೇ ಅಲೆಯಲ್ಲಿ ಸಾವು-ನೋವುಗಳು ಮರುಕಳಿಸುವುದು ಬೇಡ. ಇದಕ್ಕೂ ಮೊದಲೇ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು. ಬೀದಿಗೆ ಬಂದಿದ್ದ ಜನಸಾಮಾನ್ಯರ ಬದುಕು ಮತ್ತೆ ಹಳಿಗೆ ಮರಳು ವಾಗಲೇ ಮತ್ತೆ ಸೋಂಕು ವಕ್ಕರಿಸಿದ್ದು, ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.

ಅಲ್ಲದೆ ಸರಕಾರ ಮತ್ತೆ ಲಾಕ್‌ಡೌನ್ ನಿಯಮಗಳನ್ನು ಕಠಿಣಗೊಳಿಸಿದರೆ, ಜನರ ಬದುಕು ಸಂಪೂರ್ಣವಾಗಿ ನೆಲಕ್ಕಚ್ಚಿಬಿಡುತ್ತದೆ. ಸರಕಾರದ ನಿಯಮಗಳಿಂದ ಜನರು ರೊಚ್ಚಿಗೇಳುವ ಸಾಧ್ಯತೆಗಳನ್ನು ತಳ್ಳಿ ಹಾಕು ವಂತಿಲ್ಲ. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರಕಾರ ಮತ್ತೊಮ್ಮೆ ಜನರ ನೆರವಿಗೆ ಬರಬೇಕಿದೆ. ಎಷ್ಟೋ ಮಂದಿ ಉದ್ಯೋಗಳನ್ನು ಕಳೆದುಕೊಂಡು, ಜೀವನ ನಡೆಸಲಾಗದೇ ಸಂಕಷ್ಟದಲ್ಲಿದ್ದಾರೆ.

ಅಂತಹವರ ಬದುಕು ಮತ್ತೆ ಹಳಿಗೆ ಮರಳಬೇಕು. ಹೀಗಾಗಿ ಸರಕಾರ ಕರೋನಾ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಏನೇ ನಿರ್ಧಾರ ಕೈಗೊಂಡರೂ, ಅದು ಯಾವುದೇ ರೀತಿಯಲ್ಲಿಯೂ ಜನಸಾಮಾನ್ಯರ ಬದುಕಿಗೆ ಕಂಟಕವಾಗದಂತಿರಬೇಕು. ಕರೋನಾ ನಿಯಂತ್ರಣದಲ್ಲಿ ಸರಕಾರದ್ದಷ್ಟೇ ಜವಾಬ್ದಾರಿಯಿಲ್ಲ. ಜನಸಾಮಾನ್ಯರೂ ಸಹಕರಿಸಬೇಕು. ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯಬೇಕು. ಕರೋನಾ ನಿಯಮಾವಳಿಗಳನ್ನು ಸ್ವಯಂ ಪ್ರೇರಣೆಯಿಂದ ಪಾಲನೆ ಮಾಡಬೇಕು. ಹೀಗಾದಾಗ ಮಾತ್ರ ಕರೋನಾ ನಿಯಂತ್ರಣಕ್ಕೆ ಬರಲು ಸಾಧ್ಯ. ಜನರೂ ಕೂಡ ಇದನ್ನು ಅರಿತುಕೊಳ್ಳಬೇಕು. ಹೀಗಾಗಿ ಜನರ ಸಹಕಾರೊಂದಿಗೆ
ಕರೋನಾ ನಿಯಂತ್ರಣಕ್ಕೆ ಸರಕಾರ ಶ್ರಮಿಸಬೇಕು.