ಸಮಾಜ ಕಲ್ಯಾಣ ಇಲಾಖೆಯ ನಿರ್ವಹಣೆಯಡಿ ಬರುವ ‘ಕ್ರೈಸ್’ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಶಾಲೆಗಳಲ್ಲಿ ಕಳೆದ ೫ ವರ್ಷಗಳ ಅವಧಿ ಯಲ್ಲಿ ೯೨ ಮಕ್ಕಳು ಅಸುನೀಗಿರುವುದು ಹಾಗೂ ಆ ಪೈಕಿ ೨೯ ಮಕ್ಕಳದು ಆತ್ಮಹತ್ಯೆಯ ಪ್ರಕರಣಗಳಾಗಿರುವುದು ಆಘಾತಕಾರಿ ಸಂಗತಿ.
ಈ ದುರಂತಕ್ಕೆ ಕಾರಣವನ್ನು ಕಂಡುಕೊಂಡು ಪರಿಣಾಮಕಾರಿಯಾಗಿ ಮದ್ದು ಅರೆಯಬೇಕಿರುವುದು ಸಂಬಂಽತ ಆಳುಗ ವ್ಯವಸ್ಥೆಯ ಹೊಣೆಗಾರಿಕೆ.
ಇಂಥ ಬಹುತೇಕ ಶಾಲೆ ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಮೂಲ ಸೌಕರ್ಯದ ಕೊರತೆಯಿದ್ದುದು ಕೇಳಿಬಂದಿದೆ. ಸಾಲದೆಂಬಂತೆ, ಆಹಾರದ ಟೆಂಡರ್ ಆದ ನಂತರ ಗುತ್ತಿಗೆದಾರರು ನೀಡುವ ಮಾದರಿಗಳಿಗೂ ನಂತರ ಸರಬರಾಜಾಗುವ ಆಹಾರ ಪದಾರ್ಥಗಳಿಗೂ ಭಾರಿ ವ್ಯತ್ಯಾಸವಿರುವುದು ಕಂಡುಬಂದಿದೆ ಎನ್ನಲಾಗಿದ್ದು, ಪ್ರಕರಣವೊಂದರಲ್ಲಿ ಆಹಾರ ಪದಾರ್ಥ ವನ್ನು ಪರಿಶೀಲಿಸಿದಾಗ ಅದರಲ್ಲಿ ಪ್ಲಾಸ್ಟಿಕ್ ಫೋಮ್ ಇದ್ದುದು ಬೆಳಕಿಗೆ ಬಂದಿದೆಯಂತೆ.
ಮಕ್ಕಳಿಗೆ ಪೂರೈಸಲಾಗುವ ಆಹಾರ ಪದಾರ್ಥಗಳಲ್ಲೂ ಈ ಪರಿಯ ನಿರ್ಲಕ್ಷ್ಯವೇ? ಈ ಕರ್ಮಕಾಂಡಕ್ಕೆ ಹೊಣೆ ಯಾರು? ಅಕ್ರಮ ಮಾರ್ಗದಲ್ಲಿ ಕಾಸು ಮಾಡುವ ಇಂಥವರ ಪಾಲಿಗೆ ಮಕ್ಕಳ ಜೀವವು ಅಷ್ಟೊಂದು ಅಗ್ಗವಾಗಿಹೋಯಿತೇ? ಈ ಮಣ್ಣಿನ ಕಸುವು, ಹಿರಿಯರ ಒತ್ತಾಸೆ, ಜ್ಞಾನದ ಬೆಳಕು ಇತ್ಯಾದಿಯನ್ನು ಹೀರಿಕೊಂಡು ಭವಿತವ್ಯದ ಉಜ್ವಲ ಪುಷ್ಪಗಳಾಗಿ ಕಂಗೊಳಿಸಬೇಕಿದ್ದ ಈ ಮಕ್ಕಳೆಂಬ ಮೊಗ್ಗುಗಳು, ಹಾಗೆ ಅರಳುವ ಮುನ್ನವೇ ಹೀಗೆ ಮುರುಟಿಹೋಗಿರುವುದಕ್ಕೆ ಯಾರನ್ನು ದೂಷಿಸಬೇಕು? ಇಂಥ ಅಪಸವ್ಯಕ್ಕೆ ಕಾರಣರಾದ ದುರುಳರಿಗೆ ಕಾನೂನಿನ ಭಯ ಇಲ್ಲದಿರುವುದೇ ಇದಕ್ಕೆ ಕಾರಣವೇ? ‘ಹೊಳೆದಂಡೇಲಿರುವಾ ಗರಕಿಯ ಕುಡಿಹಾಂಗ ಹಬ್ಬಲಿ ಅವರ ರಸಬಳ್ಳಿ’ ಎಂದು ನಮ್ಮ ಜಾನಪದ ಮಹಿಳೆಯು ಹರಸಿದ ನಾಡಿದು.
ಆದರೆ ಅಂಥ ಉಜ್ವಲ ಸಂತಾನಗಳ ರಸಬಳ್ಳಿಯನ್ನು ಕಣ್ತುಂಬಿಕೊಳ್ಳುತ್ತ ಅವರ ಭವ್ಯ ಭವಿಷ್ಯದ ಕನಸು ಕಾಣುತ್ತಿದ್ದ ಹೆತ್ತವರ ಕಂಗಳಲ್ಲಿ ತುಂಬಿರುವ ಕಣ್ಣೀರನ್ನು ಒರೆಸುವವರು ಯಾರು? ಸ್ವಾರ್ಥ ಸಾಧನೆಗೂ, ಹಣದ ಹಪಹಪಿಗೂ ಒಂದು ಮಿತಿಯಿದೆ; ಅದು ಅತಿಯಾದರೆ ಇನ್ಯಾರೋ ಅಮಾಯಕರು ಬಲಿಪಶುವಾಗುತ್ತಾರೆ ಎಂಬುದಕ್ಕೆ ಈ ಮಕ್ಕಳ ಸಾವೇ ಸಾಕ್ಷಿ.