Wednesday, 18th September 2024

ಟೀಕಿಸುವ ಮುನ್ನ ಯೋಚಿಸಲಿ

ಜಪಾನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ‘ರಷ್ಯಾ-ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿ ರಷ್ಯಾವನ್ನು ಟೀಕಿಸದಿರುವ ಭಾರತದ್ದು ಇಬ್ಬಗೆಯ ನೀತಿಯಲ್ಲವೇ?’ ಎಂದು ಅಲ್ಲಿ ಕೇಳಲಾದ ಪ್ರಶ್ನೆಗೆ, ‘ಭಾರತದ ಸಾಕಷ್ಟು ಪ್ರಾಂತ್ಯಗಳನ್ನು ಅನ್ಯ ದೇಶದವರು ಆಕ್ರಮಿಸಿಕೊಂಡಿ ದ್ದಾರೆ; ಈ ಬೆಳವಣಿಗೆಯ ವಿರುದ್ಧ ನಮ್ಮನ್ನು ಯಾರೂ ಬೆಂಬಲಿಸಲಿಲ್ಲ. ಅದರ ಬಗ್ಗೆ ಜಗತ್ತು ಜಾಣಮೌನ ವಹಿಸಿದೆ’ ಎಂದು ಸೂಚ್ಯವಾಗಿ ಉಲ್ಲೇಖಿಸಿ ಭಾರತದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಜೈಶಂಕರ್ ಸಮರ್ಥನೆ ನಿಜಕ್ಕೂ ಶ್ಲಾಘನೀಯ. ಒಂದು ಕಾಲಕ್ಕೆ, ಅಂತಾರಾಷ್ಟ್ರೀಯ ವಿವಾದ/ಚರ್ಚಾವಿಷಯಗಳಿಗೆ ಸಂಬಂಧಿಸಿ ಅಲಿಪ್ತ ನೀತಿಯನ್ನು ಹೊಮ್ಮಿಸುತ್ತಿದ್ದ ಭಾರತವೀಗ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ತನ್ನ ವಿದೇಶಾಂಗ ನೀತಿಯಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಂಡಿದೆ. ಇದು ಕೆಲವರಿಗೆ ಅಪಥ್ಯವಾಗಿ ಕಾಣುವುದೇಕೋ ತಿಳಿಯದು. ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುವಿಕೆ, ದೇಶದ ಗಡಿಯೊಳಗೆ ಕಳ್ಳತನ ದಿಂದ ನುಸುಳಿ ವಿಧ್ವಂಸಕ ಕೃತ್ಯಗಳನ್ನು ನಡೆಸುವಿಕೆ ಹೀಗೆ ನೆರೆರಾಷ್ಟ್ರ ಪಾಕಿಸ್ತಾನ ಒಂದು ಕಾಲಕ್ಕೆ ನಮಗೆ ನೀಡಿದ ಕಿರಿಕಿರಿ ಅಷ್ಟಿಷ್ಟಲ್ಲ.

ಕೇಂದ್ರದಲ್ಲಿ ಆಳುಗ ವ್ಯವಸ್ಥೆ ಬದಲಾದ ನಂತರ, ಇಂಥ ಎಲ್ಲ ಕಿತಾಪತಿಗಳಿಗೆ ಭಾರತ ಸಮರ್ಥವಾಗೇ ಮದ್ದು ಅರೆದಿದೆ. ಪಾಕ್ ಚಿತಾವಣೆಯಿಂದಾಗಿ ವಿಚ್ಛಿದ್ರಕಾರಕ/ಭಯೋತ್ಪಾದಕ ಕೃತ್ಯಗಳು ತಾರಕಕ್ಕೇರಿದಾಗ, ಅವನ್ನು ಸ್ವಂತಬಲದಿಂದ ತಹಬಂದಿಗೆ ತಂದಿದ್ದು ಭಾರತವೇ. ದೇಶದ ಏಕತೆ, ಸುರಕ್ಷತೆ, ಸಾರ್ವಭೌಮತೆ, ಸಮಗ್ರತೆಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಈ ಮಟ್ಟಿಗಿನ ಆಕ್ರಮಣಕಾರಿ ನಿಲುವು ಬೇಕೇ ಬೇಕು. ಆದರೆ ಇಂಥ ಗಟ್ಟಿತನವನ್ನು ಗುರುತಿಸದ ಕೆಲ ದೇಶಗಳು, ಉಕ್ರೇನ್-ರಷ್ಯಾ ನಡುವಿನ ಯುದ್ಧದ ವಿಷಯದಲ್ಲಿ ಭಾರತ ರಷ್ಯಾವನ್ನೇಕೆ ಟೀಕಿಸಿಲ್ಲ? ಎಂದು ಪ್ರಶ್ನಿಸುವ ಮೂಲಕ ತಮ್ಮ ವ್ಯಾಪ್ತಿಗೆ ಸೇರದ ವಿಷಯದಲ್ಲಿ ಮೂಗು ತೂರಿಸುತ್ತಿವೆ, ‘ಮೊಸರಲ್ಲಿ ಕಲ್ಲು ಹುಡುಕುವ’ ಕೆಲಸ ಮಾಡುತ್ತಿವೆ ಎನ್ನಬೇಕಾಗುತ್ತದೆ.

ಇದನ್ನು ಗಮನದಲ್ಲಿಟ್ಟುಕೊಂಡೇ ಜೈಶಂಕರ್ ಅವರು, ‘ಜನರು ತಮಗೆ ಅನುಕೂಲವಾಗುವುದನ್ನು ಮಾತ್ರ ಉಲ್ಲೇಖಿಸುತ್ತಾರೆ, ಅನುಕೂಲವಾಗದಿರುವು ದನ್ನು ಕೈಬಿಡುತ್ತಾರೆ’ ಎಂದು ಚುರುಕು ಮುಟ್ಟಿಸಿರುವುದು ಸರಿಯಾಗೇ ಇದೆ.

Leave a Reply

Your email address will not be published. Required fields are marked *