Saturday, 14th December 2024

ಸೈಬರ್‌ ವಂಚನೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ

ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗೆ ಪ್ರತಿಯೊಬ್ಬರೂ ಯಾವುದೋ ಒಂದು ರೂಪದಲ್ಲಿ ಒಳಗಾಗುತ್ತಿದ್ದಾರೆ. ದಿನಕ್ಕೊಂದು ಹೊಸ ಪ್ರಯೋಗದ ಮೂಲಕ ವಂಚನೆಯನ್ನೆ ವೃತ್ತಿ ಮಾಡಿಕೊಂಡಿರುವ ಸೈಬರರ್ ಖದೀಮರು ಸಾರ್ವಜನಿಕರಿಂದ ಹಣ ದೋಚಲು ವಾಟ್ಸಾಪ್ ಹ್ಯಾಕ್ ಮಾಡಿ ವಂಚಿಸುವ ಹೊಸದೊಂದು ಮಾರ್ಗ ಕಂಡುಕೊಂಡಿದ್ದಾರೆ.

ಇದರಿಂದ ಹಲವಾರು ಮಂದಿ ಲಕ್ಷಾಂತರ ರುಪಾಯಿ ಕಳೆದುಕೊಂಡಿರುವ ಕುರಿತು ದೂರುಗಳು ದಾಖಲಾಗುತ್ತಲೇ ಇವೆ. ಸೈಬರ್ ಕಳ್ಳರು ಹೊಸ ಆಪ್ ಹೆಸರಿನಲ್ಲಿ ಬಳಕೆದಾರರ ಮೊಬೈಲ್‌ಗೆ ಸಂದೇಶವೊಂದನ್ನು ಕಳುಹಿಸು ತ್ತಾರೆ. ನಂತರ ವಂಚಕರು ಬಳಕೆದಾರರಿಗೆ ಕರೆ ಮಾಡುತ್ತಾರೆ. ಈ ಕರೆ ಸ್ವಿಕರಿಸುತ್ತಿದ್ದಂತೆ 67 ಅಥವಾ 405 ನಿಂದ ಪ್ರಾರಂಭವಾಗುವ ಸಂಖ್ಯೆ ಗಳನ್ನು ಡಯಲ್ ಮಾಡುವಂತೆ ಬಳಕೆದಾರರಿಗೆ ಹ್ಯಾಕರ್‌ಗಳು ಸೂಚಿಸುತ್ತಾರೆ.

ಇದನ್ನು ಅನುಸರಿಸಿದರೆ ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಯಿಂದ ಲಾಗ್ ಔಟ್ ಆಗುತ್ತಾರೆ. ಹ್ಯಾಕರ್‌ಗಳು ಲಾಗ್‌ಇನ್ ಆಗುತ್ತಾರೆ. ಆಗ ಬಳಕೆದಾರರ ಮೊಬೈಲ್‌ನಲ್ಲಿರುವ ದತ್ತಾಂಶ ಸೇರಿದಂತೆ ಮತ್ತಿತರ ಮಾಹಿತಿ ವಂಚಕನ ಕೈ ಸೇರುತ್ತದೆ. ಈ ವೇಳೆ ವಂಚಕನು ಬಳಕೆದಾರರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಫನ್ ನಂಬರ್‌ಗಳಿಗೆ ತಾನು ಸಂಕಷ್ಟದಲ್ಲಿರುವಂತೆ ಸಂದೇಶ ರವಾನಿಸಿ ಹಣ ಕೇಳುತ್ತಾನೆ.

ಬಳಕೆದಾರರ ಮೊಬೈಲ್ ಸಂಖ್ಯೆಯಲ್ಲಿ ಸಂದೇಶ ಬಂದಿರುವುದರಿಂದ ಸ್ವಿಕರಿಸುವವರು ನಂಬಿ ಹಣ ಹಾಕಿ ವಂಚನೆ ಗೊಳಗಾಗುತ್ತಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ವಾಟ್ಸಾಪ್‌ಗೆ ಲಾಗ್‌ಇನ್ ಆಗುವ ಸೈಬರ್ ವಂಚಕರು ಬಳಕೆದಾರರ ಮೊಬೈಲ್‌ಗೆ ಬರುವ ಮೆಸೇಜ್‌ಗಳು ಹಾಗೂ ಫೋಟೊಗಳು, ವಿಡಿಯೋಗಳನ್ನು ನೋಡುತ್ತಿರುತ್ತಾರೆ. ತೀರಾ ಪ್ರಮುಖವಾದ ವ್ಯಕ್ತಿಗಳು ಪತ್ನಿ, ಮಕ್ಕಳು, ಬ್ಯುಸಿನೆಸ್‌ಗೆ ಸಂಬಂಧಪಟ್ಟ ವಿಷಯಗಳೂ ಸೇರಿದಂತೆ ವೈಯಕ್ತಿಕ ವಿಷಯಗಳು ವಾಟ್ಸಾಪ್‌ನಲ್ಲಿ ಬರುತ್ತವೆ.

ಇದನ್ನು ಇಟ್ಟುಕೊಂಡು ಬಳಕೆದಾರರಿಗೆ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ಇವೆ. ಇನ್ನೂ ಹಲವಾರು ಮಂದಿ ಲಕ್ಷಾಂತರ ರುಪಾಯಿಗಳನ್ನು ದಂಧೆಕೋರ ರಿಗೆ ಕೊಟ್ಟಿದ್ದಾರೆ. ಇಷ್ಟು ದಿನ ಫೇಸ್‌ಬುಕ್‌ನಲ್ಲಿ ದಾಳಿ ಮಾಡುತ್ತಿದ್ದ ಸೈಬರ್ ವಂಚಕರು ಇದೀಗ ವಾಟ್ಸಾಪ್‌ನಲ್ಲೂ ತಮ್ಮ ಹಾವಳಿ ಮುಂದುವರಿಸಿದ್ದ ಅನೇಕರಿಗೆ ತಿಳಿದಿಲ್ಲ. ಆದ್ದರಿಂದ ಜನರಲ್ಲಿ ಸೈಬರ್ ವಂಚನೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಜತೆಗೆ ಸೈಬರ್ ಪೊಲೀಸರ ಸಂಖ್ಯೆ ಮತ್ತು ಕಾರ್ಯದಕ್ಷತೆ ಹೆಚ್ಚಿಸುವುದು ಅವಶ್ಯವಾಗಿದೆ.