ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ೧೬ ಸಾವಿರ ಪೊಲೀಸ್ ಹುದ್ದೆಗಳನ್ನು ಭರ್ತಿಮಾಡಿ, ಎಲ್ಲ ಜಿಲ್ಲೆಗಳಲ್ಲಿ ಹೊಸ ಸೈಬರ್ ಠಾಣೆ ಸ್ಥಾಪಿಸುವುದಾಗಿ ರಾಜ್ಯ ಸರಕಾರ ಘೋಷಿಸಿದೆ.
ರಾಜ್ಯ ಸರಕಾರ ಘೋಷಿಸಿರುವ ಈ ವಿಷಯ, ಪ್ರಸ್ತುತ ಸಂದರ್ಭದಲ್ಲಿ ಅಗತ್ಯ ಮಾತ್ರವಲ್ಲ, ಅನಿವಾರ್ಯವಾಗಿ ಪರಿಣಮಿಸಿದೆ. ಈ ಘೋಷಣೆಯನ್ನು ಎಷ್ಟು ಬೇಗ ಆದ್ಯತೆ ನೀಡಿ ಪೂರ್ಣಗೊಳಿಸುತ್ತದೆಯೋ ಅಷ್ಟು ಬೇಗ ರಾಜ್ಯದಲ್ಲಿ ಸುರಕ್ಷತೆಯ ಪಾತ್ರ ಹೆಚ್ಚಾಗಲಿದೆ. ಇದೀಗ ದೇಶದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಪ್ರಕರಣಗಳ ಪ್ರಮಾಣದಲ್ಲಿ ರಾಜ್ಯವೇ ಪ್ರಥಮ ಸ್ಥಾನದಲ್ಲಿದೆ ಎಂಬುದು ವಿಷಾದನೀಯ
ಸಂಗತಿ.
ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೋ(ಎನ್‌ಸಿಆರ್‌ಬಿ) ೨೦೧೯ನೇ ಸಾಲಿನಲ್ಲಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ಕರ್ನಾಟಕ ರಾಜ್ಯವು ೨೦ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಹೊಂದಿದ್ದು ಶೇ.೬೩.೫ರಷ್ಟು ಪ್ರಮಾಣವನ್ನು ಪಡೆದು ಪ್ರಥಮ ಸ್ಥಾನದಲ್ಲಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಅಸ್ಸಾಂ ರಾಜ್ಯ ಗಳು ನಂತರದ ಸ್ಥಾನದಲ್ಲಿವೆ.
ಇಂಥ ಸಂದರ್ಭದಲ್ಲಿ ಸೈಬರ್ ಕ್ರೈಂ ನಿವಾರಣೆಗೆ ಆದ್ಯತೆ ನೀಡಬೇಕಿರುವುದು ಆರಕ್ಷಕ ಇಲಾಖೆಯ ಪ್ರಮುಖ ಕರ್ತವ್ಯವಾದರೂ, ಸಿಬ್ಬಂದಿ – ತಂತ್ರಜ್ಞಾನ – ಅನುದಾನಗಳ ಕೊರತೆಯಿಂದಾಗಿ ಆರಕ್ಷಕ ಇಲಾಖೆಯೂ ನಿರೀಕ್ಷಿತ ಪ್ರಮಾಣವನ್ನು ತಲುಪಲಾಗಿಲ್ಲ. ಆದರೆ ಇದೀಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆ ಸ್ಥಾಪಿಸುವುದಾಗಿ ಭರವಸೆ ನೀಡಿರುವುದರಿಂದ ಸೈಬರ್ ಅಪರಾಧ ಪ್ರಕರಣ ನಿವಾರಣೆಯ ಬಗ್ಗೆ ಒಂದಷ್ಟು ಭರವಸೆ ವ್ಯಕ್ತವಾಗಿದೆ.