Sunday, 15th December 2024

ಸೈಬರ್ ಸುರಕ್ಷತೆಗೆ ಮುಂದಾಗಿ

ಕಳೆದ ಒಂದು ತಿಂಗಳ ಅವಧಿಯಲ್ಲಿ ಸೈಬರ್ ವಂಚಕರು ಜನರಿಂದ ೨ ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ದೋಚಿರುವ ಸುದ್ದಿ ತುಮಕೂರಿನಿಂದ ವರದಿಯಾಗಿದೆ. ‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ದುಪ್ಪಟ್ಟು ಲಾಭ ದಕ್ಕಿಸಿಕೊಳ್ಳಬಹುದು, ಮನೆಯಲ್ಲಿ ಇದ್ದುಕೊಂಡೇ ಆನ್ ಲೈನ್ ಮುಖಾಂತರ ಕೆಲಸ ಮಾಡುತ್ತಾ ದಿನಕ್ಕೆ ಸಾವಿರಾರು ರುಪಾಯಿ ಸಂಪಾದಿಸಬಹುದು’ ಎಂಬ ಶೈಲಿಯ ಬಗೆಬಗೆಯ ಆಮಿಷಗಳನ್ನು ಒಡ್ಡಿ ಈ ವಂಚಕರು ಜನರಿಗೆ ಮೋಸ ಮಾಡಿದ್ದಾರೆ ಎಂಬುದು ಲಭ್ಯ ವರ್ತಮಾನ.

ಆದರೆ, ಇವರು ಬೀಸಿದ ಬಲೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್‌ಗಳು, ಉದ್ಯಮಿಗಳು, ಪ್ರಾಧ್ಯಾಪಕರು, ಶಿಕ್ಷಕರಂಥ ಅಕ್ಷರಸ್ಥರೇ ಸಿಲುಕಿ ಲಕ್ಷಾಂತರ ರುಪಾಯಿ ಕಳೆದುಕೊಂಡಿರುವುದಕ್ಕೆ ಏನನ್ನುವುದು? ‘ಮೋಸ ಹೋಗುವವರು ಇರುವವರೆಗೂ, ಮೋಸ ಮಾಡುವವರು ಇದ್ದೇ ಇರುತ್ತಾರೆ’ ಎಂಬ
ಸಿನಿಮಾ ಸಂಭಾಷಣೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ಆಕ್ಷರಸ್ಥರನ್ನೇ ಯಾಮಾರಿಸಿರುವ ಸೈಬರ್ ವಂಚಕರು, ಅಮಾಯಕರನ್ನು ಅದಿನ್ಯಾವ ಪರಿಯಲ್ಲಿ ಲೂಟಿ ಮಾಡಿರಬಹುದು ಎಂಬುದನ್ನೊಮ್ಮೆ ಊಹಿಸಿಕೊಳ್ಳಿ.

ಆನ್ ಲೈನ್‌ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುವ ಇಂಥ ಆಮಿಷಗಳ ಜಾಹೀರಾತನ್ನು ನಿರ್ಲಕ್ಷಿಸಬೇಕು ಮತ್ತು ಮೊಬೈಲ್‌ ಗಳಿಗೆ ಬಂದು ಬೀಳುವ ಇಂಥ ಲಿಂಕ್‌ಗಳನ್ನು ಒತ್ತಬಾರದು, ಬ್ಯಾಂಕ್ ಖಾತೆಯ ವಿವರ ಗಳನ್ನು ನೀಡಬಾರದು, ಪಾಸ್‌ವರ್ಡ್/ಒಟಿಪಿಯನ್ನು ಹಂಚಿ ಕೊಳ್ಳಬಾರದು ಎಂಬುದಾಗಿ ಪೊಲೀಸರು ಜನರನ್ನು ಕಾಲಾನುಕಾಲಕ್ಕೆ ಎಚ್ಚರಿಸುತ್ತಲೇ ಇರುತ್ತಾರೆ. ಇಷ್ಟಾಗಿಯೂ, ಬೆಂಕಿಯ ಜ್ವಾಲೆಯಿಂದ ಆಕರ್ಷಿತ ಗೊಂಡು ಅದರೆಡೆಗೆ ಧಾವಿಸಿ ಕೊನೆಗೆ ಅದರಲ್ಲೇ ಮೈಸುಟ್ಟುಕೊಳ್ಳುವ ಪತಂಗಗಳಂತೆ ನಮ್ಮ ಜನರು ಮೋಸಹೋಗುವುದೇಕೋ ಗೊತ್ತಾಗುತ್ತಿಲ್ಲ.

‘ಧನ ಸಂಪಾದನೆಗೆ ಪರಿಶ್ರಮದ ದುಡಿಮೆಯೊಂದೇ ರಾಜಮಾರ್ಗ; ಕ್ಷಿಪ್ರಕಾಲದಲ್ಲಿ ವಾಮಮಾರ್ಗದಲ್ಲಿ ಹಣ ಸಂಪಾದಿಸುವ ಚಿತ್ತಸ್ಥಿತಿ ಯಾವತ್ತಿಗೂ
ಅಪಾಯಕಾರಿಯೇ’ ಎಂಬ ಸಾರ್ವಕಾಲಿಕ ಸತ್ಯವನ್ನು ನಮ್ಮ ಜನರು ಇನ್ನಾದರೂ ಅರಿಯಬೇಕಿದೆ. ಜತೆಗೆ, ಸೈಬರ್ ವಂಚನೆಗಳಿಗೆ ಈಡಾಗದಂತೆ ಅರಿವು ತುಂಬಬಲ್ಲ ಜಾಗೃತಿ ಕಾರ್ಯಕ್ರಮಗಳನ್ನು ಸಂಬಂಧಪಟ್ಟವರು ಕಾಲಾನುಕಾಲಕ್ಕೆ ಹಮ್ಮಿಕೊಳ್ಳಬೇಕು ಹಾಗೂ ಸೈಬರ್ ಅಪರಾಧಗಳನ್ನು ಎಸಗಿ
ಸಿಕ್ಕಿಬಿದ್ದವರಿಗೆ ದಯೆ-ದಾಕ್ಷಿಣ್ಯ ತೋರದೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಆಗ ಮಾತ್ರವೇ ಈ ಸಮಸ್ಯೆ ತಹಬಂದಿಗೆ ಬಂದೀತು.