ಕಳೆದೊಂದು ವರ್ಷದಿಂದ ಸಿಲಿಂಡರ್ ಬೆಲೆ ಏರುಗತ್ತಿಯಲ್ಲಿದ್ದು, ಇದರಿಂದ ಗ್ರಾಮೀಣ ಜನರು ಸಿಲಿಂಡರ್ ಬಳಕೆಯಿಂದ ದೂರವಾಗುತ್ತಿದ್ದಾರೆ. ಕಳೆದ ೧೨ ತಿಂಗಳಲ್ಲಿ ಸಿಲಿಂಡರ್ ಬೆಲೆಯನ್ನು ೬ನೇ ಬಾರಿ ಏರಿಕೆ ಮಾಡ ಲಾಗಿದೆ. ಪ್ರಸ್ತುತ ಸಿಲಿಂಡರ್ ಬೆಲೆ ?೧,೧೫೦ಕ್ಕೆ ಏರಿಕೆಯಾಗಿದೆ.
ಒಂದೆಡೆ ನಿರುದ್ಯೋಗ ಸಮಸ್ಯೆ, ಇನ್ನೊಂದೆಡೆ ವ್ಯಾಪಾರ ಇಲ್ಲದೆ ಜನ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಅತ್ಯಗತ್ಯ ವಸ್ತುವಾದ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಹೀಗಾಗಿ ಇಷ್ಟೊಂದು ಹಣ ಕೊಟ್ಟು ಸಿಲಿಂಡರ್ ಖರೀದಿಸುವ ಸಾಮರ್ಥ್ಯವಿಲ್ಲದಿರುವುದರಿಂದ ಮತ್ತೆ ಹಳೆ ಪದ್ಧತಿಯ ಅಡುಗೆ ಮಾಡಲು ಆರಂಭಿಸುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಕೆಂದ್ರ ಸರಕಾರವು ಮೇಲಿಂದ ಮೇಲೆ ಅಡುಗೆ ಅನಿಲ ದರವನ್ನು ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ.
ಆಡಳಿತ ಪಕ್ಷಗಳ ವಿರುದ್ಧ ಪ್ರತಿಪಕ್ಷಗಳು ಈ ವಿಚಾರವಾಗಿ ಕಾಲಕಾಲಕ್ಕೆ ರಸ್ತೆಗಿಳಿದು ಪ್ರತಿಭಟನೆಗಳನ್ನು ಮಾಡು ತ್ತಲೇ ಬಂದಿವೆ. ಆದರೆ ‘ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಅಡುಗೆ ಅನಿಲದ ದರ ಏರಿಕೆ ಆಗುತ್ತಲೇ ಇರುತ್ತದೆ, ತಮ್ಮ ಅವಧಿಯಲ್ಲಷ್ಟೇ ಅಲ್ಲ ಹಿಂದಿನ ಸರಕಾರ ಇದ್ದಾಗಲೂ ಏರಿಕೆ ಆಗಿತ್ತು’ ಎಂದು ಆಳುವವರು ಸಮರ್ಥಿಸಿ ಕೊಳ್ಳುತ್ತಲೇ ಬಂದಿದ್ದಾರೆ. ಹಿಂದಿನವರ ನೀತಿ ನಿಯಮಾವಳಿಗಳನ್ನು ಮುಂದುವರಿಸುವುದೇ ಇಂದಿನವರ ಕೆಲಸ ಎಂದು ಸಮರ್ಥಿಸಿಕೊಳ್ಳುವುದು ಸರಿಯಾದ ಮಾರ್ಗವಲ್ಲ. ಆದ್ದರಿಂದ ಬಡವರಿಗೆ ಕಡಿಮೆ ದರದಲ್ಲಿ ಅಡುಗೆ ಅನಿಲ ಸಿಗಬೇಕಾದರೆ ಅಡುಗೆ ಅನಿಲವನ್ನು ಆಹಾರ ಭದ್ರತಾ ವ್ಯವಸ್ಥೆಯಡಿ ಸೇರಿಸಿ ಜನಸಾಮಾನ್ಯರ ಹಿತ ಕಾಯಬೇಕಿದೆ.
ಅಡುಗೆ ಮಾಡಲು ವಿಜ್ಞಾನಿಗಳು ಪರ್ಯಾಯ ಇಂಧನ ಶೋಧಿಸುವುದಕ್ಕಾದರೂ ಸರಕಾರ ಉತ್ತೇಜನ ನೀಡಬೇಕು. ಜನರು ಪರ್ಯಾಯ ಆಹಾರ ಪದ್ಧತಿಗಳನ್ನು ಶೋಧಿಸಿಕೊಳ್ಳಲು ಆಹಾರ ತಜ್ಞರು ಸಲಹೆ ಸೂಚನೆಗಳನ್ನು ನೀಡಬೇಕು. ಇಂತಹ ಹಲವಾರು ಸಾಧ್ಯತೆಗಳ ಬಗ್ಗೆ ಯೋಚಿಸುವ ಕಾಲ
ಸನ್ನಿಹಿತವಾದಂತಿದೆ. ಇಲ್ಲವಾದರೆ ಕೇಂದ್ರ ಸರಕಾರದ ಮಹತ್ವದ ‘ಉಜ್ವಲ’ ಯೋಜನೆಯ ಉದ್ದೇಶಗಳು ಈಡೇರಿದಂತಾಗುವುದಿಲ್ಲ.