ಕಂದಾಯ ಸಚಿವ ಆರ್.ಅಶೋಕ ಅವರ ಮಹತ್ವಾಕಾಂಕ್ಷಿ ಕಾರ್ಯಕ್ರಮ ‘ಡಿಸಿ ನಡೆ ತಾಲೂಕು ಕಡೆ’ ಕಾರ್ಯಕ್ರಮವು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸ್ಥಗಿತಗೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕೆಲವು ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳು ಬಂದು ಹೋದರೂ ಯಾರಿಗೂ ಗೊತ್ತಾಗುತ್ತಿಲ್ಲ ಎನ್ನಲಾಗುತ್ತಿದೆ. ಆಡಳಿತವೇ ಜನರ ಮನೆ ಬಾಗಿಲಿಗೆ ತಲುಪ ಬೇಕು ಎಂಬ ಸರಕಾರದ ಒಳ್ಳೆಯ ಉದ್ದೇಶದಿಂದ ಕಂದಾಯ ಸಚಿವ ಆರ್.ಅಶೋಕ ಅವರು ರಾಜ್ಯದ ಪ್ರತಿಯೊಬ್ಬ ಜಿಲ್ಲಾಧಿಕಾರಿಯೂ ತಿಂಗಳ ಪ್ರತಿ ಮಂಗಳವಾರ ತಾಲೂಕು ಕೇಂದ್ರಗಳಲ್ಲಿ ಉಪಸ್ಥಿತರಿದ್ದು ಜನ ಸಾಮಾನ್ಯರ ಕೆಲಸ ಮಾಡಿಕೊಡಬೇಕು ಎಂದು ಆದೇಶ ನೀಡಿದ್ದರು.
ಸಚಿವರು ಜೂನ್ ತಿಂಗಳ ಮೊದಲ ವಾರ ಹೊರಡಿಸಿದ್ದ ಆದೇಶವು ಮೊದ ಲೆರಡು ವಾರ ಕಟ್ಟುನಿಟ್ಟಾಗಿ ಪಾಲನೆಯಾಯಿತು. ಸಭೆ, ಸಮಾರಂಭ, ಪ್ರಗತಿ ಪರಿಶೀಲನೆ, ಕೋರ್ಟ್ ಹಾಜರಾತಿ ಮೊದಲಾದ ಕೆಲಸಗಳ ಒತ್ತಡದಿಂದ ಜಿಲ್ಲಾಧಿಕಾರಿಗಳಿಗೆ ಪ್ರತಿ ಮಂಗಳವಾರ ಬಿಡುವು ಮಾಡಿಕೊಂಡು ತಾಲೂಕು ಕೇಂದ್ರಗಳಿಗೆ ತೆರಳುವುದು ಕಷ್ಟವಾಗಿದೆ ಎಂಬ ದೂರುಗಳ ಬಂದ ಹಿನ್ನೆಲೆಯಲ್ಲಿ ಸಚಿವ ಆರ್.ಅಶೋಕ ಅವರು ನಿಯಮ ವನ್ನು ಸಡಿಲಿಸಿ ಪ್ರತಿ ಮಂಗಳವಾರದ ಬದಲಿಗೆ ವಾರದ ಯಾವುದಾದರೂ ಒಂದು ದಿನ ತಾಲೂಕು ಕೇಂದ್ರಗಳಿಗೆ ತೆರಳಬಹುದು ಎಂದು ಸೂಚಿಸಿದರು.
ಸರಕಾರ ಯಾವಾಗ ನಿಯಮ ಸಡಿಲಿಸಿತೋ ಯೋಜನೆ ಕುರಿತಾಗಿ ಅಧಿಕಾರಿಗಳಲ್ಲಿ ಇದ್ದ ಗಂಭೀರತೆ ಕಡಿಮೆ ಆಗಿದೆ. ಜಿಽಕಾರಿಗಳು ತಾಲೂಕು ಕೇಂದ್ರಗಳಿಗೆ ಬರುವುದರ ಕುರಿತು ಮುಂಚಿತವಾಗಿ ಜನರಿಗೆ ತಿಳಿಸುವ ಕೆಲಸ ಆಗುತ್ತಿಲ್ಲ. ಜನ ಸಾಮಾನ್ಯರಿಗೆ ಇರಲಿ. ಹೀಗಾಗಿ ಜಿಽಕಾರಿಗಳು ಬಿಡುವು ಮಾಡಿಕೊಂಡು ತಾಲೂಕು ಕೇಂದ್ರಗಳಿಗೆ ತೆರಳಿದರೂ ಅದರ ಉಪಯೋಗ ಅಷ್ಟಕ್ಕಷ್ಟೆ ಎಂಬಂತಾಗಿದೆ. ಜನರೇ ಬರದಿದ್ದ ಮೇಲೆ ಇಲ್ಲಿ ಕುಳಿತು ಏನು ಮಾಡುವುದು ಎಂಬ ಉದಾಸೀನ ಭಾವ ಕೆಲವು ಜಿಽಕಾರಿಗಳಲ್ಲೂ ಮೂಡತೊಡಗಿದೆ.
ಹೀಗಾಗಿ ಒಟ್ಟಾರೆ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವೊಂದು ಹಳಿ ತಪ್ಪುತ್ತಿದೆ. ಸರಕಾರ ಕೂಡಲೇ ಎಚ್ಚೆತ್ತು ಡಿಸಿ ನಡೆ ತಾಲೂಕು ಕಡೆ ಕಾರ್ಯಕ್ರಮವು ಮತ್ತೆ ಚುರುಕಿನಿಂದ ನಡೆಯುವಂತೆ ನೋಡಿಕೊಳ್ಳಬೇಕಿದೆ. ಆ ಮೂಲಕ ಕಂದಾಯ ಇಲಾಖೆಯ ಪ್ರತಿ ದಾಖಲೆಗಳು ಜನರ ಮನೆಗೆ ತಲುಪುವಂತೆ ನೋಡಿಕೊಳ್ಳಬೇಕಿದೆ.