‘ನೀವು ಬರೀ ನಿರ್ಮಾಪಕರಲ್ಲ, ನಮ್ಮ ಅನ್ನದಾತರು’- ಇದು ಚಲನಚಿತ್ರ ನಿರ್ಮಾಪಕರನ್ನು ಉದ್ದೇಶಿಸಿ ಡಾ.ರಾಜ್‌ಕುಮಾರ್
ಅವರು ಹೇಳುತ್ತಿದ್ದ ವಿನಯಪೂರ್ವಕ ಮಾತು. ಅಂಥ ಇಬ್ಬರು ಅನ್ನದಾತರು ಎರಡು ದಿನಗಳ ಅಂತರದಲ್ಲಿ ಅಸ್ತಂಗತ ರಾಗಿದ್ದಾರೆ.
ಒಬ್ಬರು ಸೌಂದರ್ಯ ಜಗದೀಶ್, ಮತ್ತೊಬ್ಬರು ದ್ವಾರಕೀಶ್. ಇದು ನಿಜಕ್ಕೂ ನೋವಿನ ಸಂಗತಿ. ಈ ಪೈಕಿ ದ್ವಾರಕೀಶ್ ಅವರದ್ದು, ‘ವಾಮನನಾಗಿದ್ದೂ ತ್ರಿವಿಕ್ರಮನ ಸಾಧನೆ’ ಎಂದರೆ ಅತಿಶಯೋಕ್ತಿಯಲ್ಲ. ಹಿಂದಿ ಸಿನಿಮಾಗಳ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್‌ರನ್ನು ಕನ್ನಡಕ್ಕೆ ಕರೆತಂದು ‘ಕುಳ್ಳ ಏಜೆಂಟ್ ೦೦೦’ ಚಿತ್ರದಲ್ಲಿ ಹಾಡಿಸಿದ್ದು, ‘ಸಿಂಗಾಪುರದಲ್ಲಿ ರಾಜಾ ಕುಳ್ಳ’ ಚಿತ್ರದ ಮೂಲಕ ಮೊದಲ ಬಾರಿಗೆ ವಿದೇಶದಲ್ಲಿ ಕನ್ನಡ ಚಿತ್ರವೊಂದರ ಚಿತ್ರೀಕರಣ ನಡೆಯುವುದಕ್ಕೆ ಕಾರಣರಾಗಿದ್ದು, ‘ಆಫ್ರಿಕಾದಲ್ಲಿ ಶೀಲಾ’ ಎಂಬ ಸಾಹಸಕ್ಕೆ ಕೈಹಾಕಿದ್ದು, ರಜನಿಕಾಂತ್‌ರಂಥ ಮಹಾರಥಿಗಳ ಚಿತ್ರವನ್ನು ನಿರ್ಮಿಸಿದ್ದು, ‘ಗುರು ಶಿಷ್ಯರು’ ಚಿತ್ರದಲ್ಲಿ ಹಾಸ್ಯನಟರ ಮೇಳವನ್ನೇ ಬೆಳ್ಳಿತೆರೆಯ ಮೇಲೆ ಬಿಂಬಿಸಿ ಜನರನ್ನು ನಗಿಸಿ-ನಲಿಸಿದ್ದು ಹೀಗೆ ಹೇಳುತ್ತ ಹೋದರೆ ಅವರ ಸಾಧನೆಗಳ
ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ತಮ್ಮ ಸುದೀರ್ಘ ಚಿತ್ರಜೀವನದಲ್ಲಿ ದ್ವಾರಕೀಶ್ ಅಗಾಧವಾಗಿ ಪಡೆದುಕೊಂಡಿದ್ದೂ ಉಂಟು, ಕಳೆದುಕೊಂಡಿದ್ದೂ ಉಂಟು. ಹಾಗಂತ ಚಿತ್ರರಂಗದಿಂದ ವಿಮುಖರಾಗದೆ, ಇಲ್ಲಿಯೇ ಬಿತ್ತಿ ಬೆಳೆ ತೆಗೆದಿದ್ದು ಅವರ ಹೆಗ್ಗಳಿಕೆ. ಮಾರ್ಗಮಧ್ಯದಲ್ಲೊಮ್ಮೆ ಅವರು ರಾಜಕೀಯದ ಕಡೆಗೆ ಹಾಗೇ ಇಣುಕಿನೋಡಿದ್ದು ಹೌದಾದರೂ, ಅದು ತಮಗೊಗ್ಗುವ ಕಾರ್ಯಕ್ಷೇತ್ರವಲ್ಲ ಎಂಬುದನ್ನು ಕೆಲ ದಿನಗಳಲ್ಲೇ ಕಂಡುಕೊಂಡು ಮತ್ತೆ ಚಿತ್ರರಂಗದಲ್ಲೇ ಸಕ್ರಿಯರಾಗಿದ್ದು ಬಣ್ಣದ ಬದುಕಿನ ಮೇಲೆ ಅವರಿಗಿದ್ದ ಮಮಕಾರಕ್ಕೆ ದ್ಯೋತಕ. ಮೂಲತಃ ನಟನಾಗಬೇಕು ಎಂದುಕೊಂಡು ಚಿತ್ರರಂಗಕ್ಕೆ ಕಾಲಿಟ್ಟವರು ದ್ವಾರಕೀಶ್.
ಆದರೆ ಅಭಿನಯಕ್ಕೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ನಿರ್ಮಾಪಕರಾಗಿದ್ದು, ನಿರ್ದೇಶಕರೂ ಆಗಿದ್ದು, ನಾಲ್ಕು ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದ್ದು ಅವರ ಹೆಗ್ಗಳಿಕೆಯೇ ಸರಿ. ದ್ವಾರಕೀಶ್ ಅವರು ಹೆಚ್ಚಾಗಿ ಕಟ್ಟಿಕೊಟ್ಟಿದ್ದು ರಿಮೇಕ್ ಚಿತ್ರಗಳನ್ನೇ ಎಂಬ ಅಪವಾದವಿದೆ. ಈ ಕುರಿತು ಅವರನ್ನು ಪ್ರಶ್ನಿಸಿದಾಗ, ‘ಅದು ರಿಮೇಕೋ ಅಥವಾ ಸ್ವಮೇಕೋ ಅನ್ನುವು ದಕ್ಕಿಂತ ಪ್ರೇಕ್ಷಕರಿಗೆ ಇಷ್ಟವಾಗುವ, ಅವರು ಚಿತ್ರಮಂದಿರಗಳೆಡೆಗೆ ಓಡೋಡಿ ಬರುವಂಥ ಚಿತ್ರಗಳನ್ನು ಮಾಡಿದ್ದೇನೆ.
ಆ ತೃಪ್ತಿ ನನಗೆ ಸಾಕು’ ಎಂದು ದ್ವಾರಕೀಶ್ ಉತ್ತರಿಸಿದ್ದುಂಟು. ಪ್ರಸ್ತುತ ಜನರು ಚಿತ್ರಮಂದಿರಗಳ ಕಡೆಗೆ ತಲೆಹಾಕುವುದನ್ನೇ ನಿಲ್ಲಿಸಿರುವ ಈ ಕಾಲಘಟ್ಟದಲ್ಲಿ ದ್ವಾರಕೀಶರ ಈ ಮಾತುಗಳು ಹೆಚ್ಚು ಅರ್ಥಪೂರ್ಣವೆನಿಸುತ್ತವೆ. ದ್ವಾರಕೀಶ್ ನಿರ್ಮಿಸಿದ ಚಲನಚಿತ್ರವೊಂದರಲ್ಲಿ ‘ಕಾಲವನ್ನು ತಡೆಯೋರು ಯಾರೂ ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ’ ಎಂಬ ಜನಪ್ರಿಯ ಗೀತೆಯೊಂದಿದೆ. ಆದರೀಗ, ಕನ್ನಡಿಗರು ಮೆಚ್ಚಿದ ಈ ‘ಪ್ರಚಂಡಕುಳ್ಳ’ ‘ಕಾಲ’ನ ಕರೆಗೆ ಓಗೊಟ್ಟು ಅವನಲ್ಲಿಗೆ ತೆರಳಿದ್ದಾರೆ. ಹೀಗಾಗಿ ಮೇಲಿನ ಹಾಡನ್ನೇ ಕೊಂಚ ಮಾರ್ಪಡಿಸಿ ‘ಕಾಲನನ್ನು ತಡೆಯೋರು ಯಾರೂ ಇಲ್ಲ’ ಎಂದು ಅಭಿಮಾನಿ ಗಳು ನೋವಿನಲ್ಲೇ ಗುನುಗುವಂತಾಗಿದೆ. ಹೋಗಿಬನ್ನಿ ದ್ವಾರಕೀಶ್ ಅವರೇ, ನಿಮಗೆ ಸದ್ಗತಿ ಸಿಗಲಿ….