Friday, 20th September 2024

ಡೆಂಘೀ ನಿಯಂತ್ರಣಕ್ಕೆ ಆಂದೋಲನ ರೂಪುಗೊಳ್ಳಲಿ

ಬಿಸಿಲು-ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಏರುತ್ತಲೇ ಇದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೧೫ ಸಾವಿರದ ಗಡಿ ಸಮೀಪಿಸಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಡೆಂಘೀ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಯ
ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣ ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲೇ ೮ ಸಾವಿರ ಸಮೀಪ
ಪ್ರಕರಣಗಳು ದಾಖಲಾಗಿವೆ. ಡೆಂಘೀ ಪ್ರಕರಣಗಳು ರಾಜ್ಯದಲ್ಲಿ ಕಳವಳಕಾರಿ ಮಟ್ಟದಲ್ಲಿ ಹೆಚ್ಚಾಗಿರುವುದಕ್ಕೆ ಆರೋಗ್ಯ ಇಲಾಖೆ, ಬೆಂಗಳೂರು ಮಹಾ
ನಗರ ಪಾಲಿಕೆ ಹಾಗೂ ರಾಜ್ಯದ ಇತರ ಸ್ಥಳೀಯ ಆಡಳಿತಗಳು ಸೂಕ್ತ ಮುನ್ನೆಚ್ಚರಿಕೆ ವಹಿಸದಿರುವುದೇ ಕಾರಣ.

ರೋಗವನ್ನು ನಿಯಂತ್ರಿಸುವ ಹೊಣೆಗಾರಿಕೆ ನಿಭಾಯಿಸಬೇಕಾದವರು ಅಂಕಿಅಂಶಗಳನ್ನು ಕಲೆಹಾಕುವುದಷ್ಟಕ್ಕೆ ತಮ್ಮ ಜವಾಬ್ದಾರಿ ಸೀಮಿತಗೊಳಿಸಿ ಕೊಂಡಿದ್ದಾರೆ. ಚಿಕಿತ್ಸೆಗಿಂತಲೂ ರೋಗವನ್ನು ನಿಯಂತ್ರಿಸುವುದೇ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಮರೆತಿದ್ದಾರೆ. ಮಳೆ ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳ ಸಂತತಿ ಉಲ್ಬಣಗೊಂಡು ಡೆಂ ವ್ಯಾಪಕವಾಗುತ್ತಿದೆ. ರಸ್ತೆಗಳಲ್ಲಿ ಮಳೆ ನೀರು ನಿಲ್ಲುತ್ತಿದ್ದರೆ ಅದರ ಹೊಣೆ ಯಾರದು? ಮಳೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಬೆಂಗಳೂರಂತೂ ಡೆಂಘೀ ಜ್ವರದ ರಾಜಧಾನಿ ಎನ್ನುವ ಕುಖ್ಯಾತಿ ಪಡೆಯುತ್ತಿದೆ.

ಡೆಂಘೀ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದ ಪ್ರದೇಶಗಳಲ್ಲಿ ಔಷಧಿ ಸಿಂಪರಿಸಲು ಬಿಬಿಎಂಪಿ ಹಿಂದೆಮುಂದೆ ನೋಡುತ್ತಿದೆ. ಚರಂಡಿ ಹಾಗೂ ಮೋರಿಗಳನ್ನು ಸುವ್ಯವಸ್ಥೆಯಲ್ಲಿಡಲು ವಿಫಲವಾಗಿರುವ ಪಾಲಿಕೆ, ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿದೆ. ಪಾಲಿಕೆಯಂತೆಯೇ ಆರೋಗ್ಯ ಇಲಾಖೆಯಲ್ಲಿಯೂ ಬಿಕ್ಕಟ್ಟಿನ ಸಂದರ್ಭಗಳನ್ನು ಎದುರಿಸುವ ಬಗ್ಗೆ ಯೋಜನೆಗಳಿದ್ದಂತಿಲ್ಲ. ಜನರಿಗೆ ನಿಜವಾದ ಭಯ ಇರುವುದು ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದ ಆಡಳಿತಯಂತ್ರದ ಬಗ್ಗೆ.

ಜಡ್ಡುಗಟ್ಟಿದ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ. ಸೊಳ್ಳೆಗಳ ನಿಯಂತ್ರಣ ಸೇರಿದಂತೆ ಪರಿಸರವನ್ನು ಚೊಕ್ಕಟ ವಾಗಿಡುವ ಅಗತ್ಯದ ಕುರಿತು ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಆಂದೋಲನದ
ರೂಪದಲ್ಲಿ ಕೈಗೊಳ್ಳಬೇಕಾಗಿದೆ.