Thursday, 19th September 2024

ರಾಜ್ಯದ ಸರ್ವತೋಮುಖ ಅಭಿವೃದ್ದಿಯ ಚಿತ್ರಣ

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಮಂಡಿಸಿದ ಮೊದಲ ಬಜೆಟ್‌ನಲ್ಲೇ ರಾಜ್ಯದ ಸರ್ವತೋಮುಖ
ಅಭಿವೃದ್ಧಿಯನ್ನು ಖಚಿತಪಡಿದ್ದಾರೆ. ಈ ಬಜೆಟ್ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸ ಚೈತನ್ಯ ಮತ್ತು ಶಕ್ತಿ ನೀಡುವಂತಿದೆ. ಕೋವಿಡ್ ಸಾಂಕ್ರಾಮಿಕದ ಸವಾಲುಗಳ ನಿರ್ವಹಣೆಯ ನಡುವೆ ಈ ಬಜೆಟ್ ಅತ್ಯಂತ ಆಶಾ ದಾಯಕವಾಗಿದೆ.

ಕೋವಿಡ್ ನಂತರ ಇದ್ದ ಆರ್ಥಿಕ ಸವಾಲುಗಳ ಮಧ್ಯೆ, ಕಲ್ಯಾಣ ಯೋಜನೆಗಳಿಗೆ ಏನೂ ಕಡಿಮೆ ಆಗದಂತೆ ಉತ್ತಮ ಲೆಕ್ಕಾಚಾರ ಮಂಡಿಸಿದ್ದಾರೆ. ರೈತರು, ನೀರಾವರಿ, ಮೂಲಸೌಕರ್ಯ, ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಅಧಿಕ ಹೂಡಿಕೆಗೆ ಆದ್ಯತೆಯ ಜತೆಗೆ ಯುವಶಕ್ತಿ, ಮಹಿಳೆಯರು ಮತ್ತು ದುರ್ಬಲ ವರ್ಗಗಳ ಜನರ ಸಬಲೀಕರಣಕ್ಕೆ ಉತ್ತೇಜನ ನೀಡಲಾಗಿದೆ. ಕೃಷಿ, ಪೂರಕ ವಲಯಗಳಿಗೆ ?33700 ಕೋಟಿ ಮೀಸಲು, ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ?43188 ಕೋಟಿ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ ?8409 ಕೋಟಿ ನಿಗದಿಪಡಿಸಿರುವುದು ಸ್ವಾಗತಾರ್ಹ.

ರಾಜ್ಯದ ಮೂಲಭೂತ ಸೌಲಭ್ಯ, ವಸತಿ, ಶಿಕ್ಷಣ, ಆರೋಗ್ಯ, ವಾಣಿಜ್ಯ, ಕೈಗಾರಿಕೆಗಳ ಅಭಿವೃದ್ಧಿಗೆ ಸಮರ್ಪಕ ಅನುದಾನಗಳನ್ನು ನೀಡ ಲಾಗಿದ್ದು, ಭವಿಷ್ಯದ ನಗರ, ಗ್ರಾಮಾಂತರ ಪ್ರದೇಶಗಳ ಏಳಿಗೆಗೆ ಮಾದರಿಯಾಗಿರುವ ಬಜೆಟ್ ಮಂಡಿಸಿದ್ದಾರೆ. ಆರೋಗ್ಯ ಕರ್ನಾಟಕ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯ ಗೊಂಡವರ ತುರ್ತು ಚಿಕಿತ್ಸೆಗೆ ತುಮಕೂರಿನಲ್ಲಿ ?20 ಕೋಟಿ ವೆಚ್ಚದಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ. ಬೆಂಗಳೂರು ನಗರದ ನಾಲ್ಕು ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಗೆ ಯೋಜನೆ  ಘೋಷಿಸಿರುವುದು ಸ್ವಾಗತಾರ್ಹ.

ಉತ್ತರ ಕರ್ನಾಟಕ ಭಾಗದ ಬಹುದಿನಗಳ ಕನಸಾಗಿದ್ದ ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ 1000 ಕೋಟಿ ರು. ಮತ್ತು ಮೇಕೆ ದಾಟು ಯೋಜನೆಗೆ 1000 ಕೋಟಿ ರು. ಅನುದಾನ ಘೋಷಿಸಿರುವುದು ಸಿಎಂ ಬದ್ಧತೆಗೆ ಉದಾಹರಣೆ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಚಿತ್ರಣವನ್ನು ಬಜೆಟ್‌ನಲ್ಲಿ ತೋರಿಸಿದ್ದಾರೆ.