ವಿಧಾನಸಭಾ ಚುನಾವಣೆ ಕಳೆದು ಕೇವಲ ೩ ತಿಂಗಳಾಗುತ್ತಿದ್ದು, ಆಗಲೇ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳೂ ಸಜ್ಜಾಗಿ ನಿಂತಂತೆ ಕಾಣುತ್ತಿದೆ. ಬಹುಮತದೊಂದಿಗೆ ಅಧಿಕಾರಕ್ಕೇರಿರುವ ಕಾಂಗ್ರೆಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನದತ್ತ ಒತ್ತು ನೀಡಿರುವಾಗಲೇ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಸರಕಾರವನ್ನು ತಿವಿಯಲಾರಂಭಿಸಿವೆ.
ಕಾಂಗ್ರೆಸ್‌ಗೆ ಈ ಪರಿಯ ಬಹುಮತ ದಕ್ಕಲು ಕಾರಣ ಗ್ಯಾರಂಟಿ ಎಂಬುದರಲ್ಲಿ ಅನುಮಾನವಿಲ್ಲ. ಲೋಕಸಭಾ ಚುನಾವಣೆಗೂ ಗ್ಯಾರಂಟಿಯ ಭೂತ ಕಾಡುತ್ತಲೇ ಇರುವುದರಿಂದ ಆರಂಭದ ದಿನದಿಂದಲೂ ಸರಕಾರದ ನಡೆಯನ್ನು ಪ್ರತಿಪಕ್ಷಗಳೆರಡೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇವೆ. ಇಂಥ ಸನ್ನಿವೇಶದಲ್ಲೇ ವಿಪಕ್ಷಗಳಿಗೆ ಅನಾಯಾಸ ಅಸವನ್ನು ಆಡಳಿತಾರೂಢರು ನೀಡುತ್ತಿದ್ದಾರೆ. ಶಾಸಕರ ಅಸಮಾಧಾನ, ಸಚಿವ ಚಲುವರಾಯ ಸ್ವಾಮಿ ಲಂಚ ಪ್ರಕರಣದ ಬೆನ್ನಲ್ಲೇ ಈಗ ಗುತ್ತಿಗೆದಾರರ ಕಮಿಷನ್ ಆರೋಪ. ೩ ತಿಂಗಳೊಳಗಿನ ಈ ಮೂರೂ ಬೆಳವಣಿಗೆಗಳು ಸರಕಾರದ ಮಟ್ಟಿಗೆ ಅನಪೇಕ್ಷಿತವಷ್ಟೇ ಅಲ್ಲ, ನಿರ್ಲಕ್ಷಿಸುವ ಸಣ್ಣ ಸಂಗತಿಗಳೂ ಅಲ್ಲ.
ಏಕೆಂದರೆ ಬಹುನಿರೀಕ್ಷೆಯೊಂದಿಗೆ ಅಧಿಕಾರಕ್ಕೆ ಬಂದ ಸರಕಾರ ಸದ್ಯಕ್ಕೆ ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಕ್ಷೇತ್ರಾಭಿವೃದ್ಧಿ ಅನುದಾನದ ಬಗೆಗಿನ ಅಸಮಾಧಾನ ಸದ್ಯಕ್ಕೆ ತಣ್ಣಗಾಗಿದ್ದರೂ ಇದರ ನೇರ ಪರಿಣಾಮ ಚುನಾವಣೆಯ ಮೇಲಾಗುವುದನ್ನು ತಳ್ಳಿ ಹಾಕುವಂತಿಲ್ಲ. ಬಿಜೆಪಿಯ ಭ್ರಷ್ಟಚಾರದ ವಿಚಾರ ಮುಂದಿಟ್ಟುಕೊಂಡೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ತನ್ನದೇ ಸಚಿವರೊಬ್ಬರ ಮೇಲಿನ ನೇರ ಆರೋಪ ರಾಜ್ಯಪಾಲರವರೆಗೆ ಮುಟ್ಟಿರುವುದರಿಂದ ಮುಜುಗರಕ್ಕೆ ಸಿಲುಕಿರುವುದು ಸತ್ಯ. ಅವೆಲ್ಲವನ್ನೂ ಮೀರಿ ಆಗ ಬಿಜೆಪಿಯನ್ನು ಹಣಿಯಲು ಬಳಸಿದ್ದ ‘ಗುತ್ತಿದಾರರ ಕಮಿಷನ್’ ಅಸವೇ ಈಗ ಕಾಂಗ್ರೆಸ್‌ಗೆ ತಿರುಗುಬಾಣವಾಗಿದೆ.
ಒಂದು ಕಾಲಕ್ಕೆ ಮಿತ್ರರಾಗಿ (೨೦೧೯) ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್-ಜೆಡಿಎಸ್, ಸಮ್ಮಿಶ್ರ ಸರಕಾರ ಪತನದ ಮರುದಿನದಿಂದಲೇ ವೈರಿಗಳಾಗಿ ವರ್ತಿಸಿವೆ. ಆ ವೈರತ್ವ ಇಂದಿಗೂ ಮುಂದುವರಿದಿರುವುದು ಮಾತ್ರ ವಲ್ಲ, ಕಾಂಗ್ರೆಸ್ ಅಽಕಾರ ಹಿಡಿಯುತ್ತಿದ್ದಂತೆಯೇ ಬಿಜೆಪಿ ಜತೆಗಿನ ಮೈತ್ರಿಗೂ ಜೆಡಿಎಸ್ ನಾಯಕರನ್ನು ಪ್ರೇರೇಪಿಸಿದೆ. ಸಂಘಟಿತವಾಗಿ ಸರಕಾರದ ವಿರುದ್ಧ ವರ್ಗಾವಣೆ, ಲಂಚದ ಆರೋಪಗಳ ಅಸ್ತ್ರ ಪ್ರಯೋಗ ನಡೆದೇ ಇದೆ. ಗಮನಿಸ ಬೇಕಾದ ವಿಚಾರವೆಂದರೆ ಯಾವುದೇ ಪಕ್ಷಗಳು ಏನೇ ಮಾಡಿ ದರೂ ಅದರ ಹಿಂದಿನ ರಾಜಕೀಯ ಉದ್ದೇಶ ಮುಂಬರುವ ಲೋಕಸಭಾ ಚುನಾವಣೆ ಎನ್ನುವುದು ಸ್ಪಷ್ಟ. ಏನಿದ್ದರೂ ರಾಜಕೀಯದ ಬಡಿದಾಟದಲ್ಲಿ ರಾಜ್ಯದ ಅಭಿವೃದ್ಧಿ ಬಡವಾಗದಿರಲಿ.