Sunday, 15th December 2024

ಡಿಜಿಟಲ್ ಮಾರ್ಗಸೂಚಿ ಪ್ರಸ್ತುತದ ಅನಿವಾರ್ಯ

ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಬೇಕೆಂಬ ಹಲವು ವರ್ಷಗಳ ಕೂಗು ಇದೀಗ ಬಗೆಹರಿಯುವ ಲಕ್ಷಣಗಳು
ಗೋಚರಿಸುತ್ತಿದೆ. ಈ ಭರವಸೆಗೆ ಕಾರಣ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲು ಮುಂದಾಗಿರುವುದು.

ಸುದ್ದಿ ಮಾಧ್ಯಮಗಳನ್ನು ಹೊರತುಪಡಿಸಿ, ಕೆಲವು ಸಾಮಾಜಿಕ ಮಾಧ್ಯಮಗಳಿಗೆ ಕಡಿವಾಣ ಹಾಕಬೇಕೆಂಬ ಕೂಗು ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ೨೦೧೮ರಲ್ಲಿ ಡಿಜಿಟಲ್ ಬರಹಗಳಿಗೆ ಸಂಬಂಧಿಸಿದಂತೆ ಒಂದು ಚೌಕಟ್ಟನ್ನು ರಚಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಬರಹವನ್ನು ಪೋಸ್ಟ್ ಮಾಡಿದ ವ್ಯಕ್ತಿಯ ಮಾಹಿತಿಯನ್ನು ನ್ಯಾಯಾಲಯ ಅಥವಾ ಸರಕಾರ
ಆದೇಶದಂತೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ವಿವರ ಬಹಿರಂಗ ಪಡಿಸುವಂತೆ ತಿಳಿಸಲಾಗಿತ್ತು.

ಇದೀಗ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ದೇಶದ ಸಾರ್ವಭೌಮತ್ವ, ಸಮಗ್ರತೆ, ಭದ್ರತೆ, ಶಾಂತಿ, ವಿದೇಶಾಂಗ ವ್ಯವಹಾರಗಳು ಹಾಗೂ ಅಶ್ಲೀಲ ಅಂಶಗಳ ಬಗ್ಗೆ ಪ್ರಚಾರ ಮಾಡುವವರ ಪತ್ತೆಹಚ್ಚಲು ಹಾಗೂ ಕ್ರಮಕೈಗೊಳ್ಳಲು ಈ
ಮಾರ್ಗಸೂಚಿ ಸಹಕಾರಿ. ಸಾಮಾಜಿಕ ಮಾಧ್ಯಮಗಳಿಂದ ತೊಂದರೆ ಗೊಳಗಾದವರಿಗೆ ೨೪ ಗಂಟೆಯೊಳಗೆ ದೂರು ದಾಖಲಿಸಿ ೧೫ ದಿನದೊಳಗೆ ಆ ಸಮಸ್ಯೆಯನ್ನು ಬಗೆಹರಿಸುವುದು ಈ ಮಾರ್ಗಸೂಚಿಯ ಆಶಯ.

ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಪ್ರದರ್ಶಿಸುವುದನ್ನು ತಡೆಯುವಲ್ಲಿಯೂ ಈ ಮಾರ್ಗಸೂಚಿ
ಪರಿಣಾಮಕಾರಿ. ಪ್ರಸ್ತುತದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಗಿಂತಲೂ ದುರ್ಬಳಕೆ ಹೆಚ್ಚಿರುವ ಈ ಸಂದರ್ಭದಲ್ಲಿ ಈ ಮಾರ್ಗಸೂಚಿ ರೂಪಿಸುತ್ತಿರುವುದು ಅನಿವಾರ್ಯ ಹಾಗೂ ಶ್ಲಾಘನೀಯ ಸಂಗತಿ.