Thursday, 12th December 2024

ಕೇಂದ್ರದತ್ತ ಮುಖ ಮಾಡಿ ಕೂರುವುದು ಸರಿಯಲ್ಲ

ರಾಜ್ಯದಲ್ಲಿ ಈ ಬಾರಿ ಅಕಾಲಿಕ ಮಳೆ, ಸತತ ಪ್ರವಾಹದಿಂದ ಬೆಳೆ ನಾಶವಾಗಿ ರೈತರು ಬೀದಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದ ಪರಿಹಾರಕ್ಕಾರಿ ರಾಜ್ಯ ಸರಕಾರ ಕಾಯುತ್ತಿರುವಂತಿದೆ. ಆದರೆ ಹೀಗೆಯೇ ಕೇಂದ್ರದತ್ತ ಮುಖ ಮಾಡಿ ಕಾಯುತ್ತಾ ಕುಳಿತರೆ ಮುಂದಿನ ಬಿತ್ತನೆ ಸಮಯದಲ್ಲಿ ರೈತರ ಕೈಗೆ ದುಡ್ಡಿಲ್ಲ ದಂತಾಗಿ ಬೆಳೆ ಬೆಳೆಯಲಿಕ್ಕೆ ಆಸಕ್ತಿ ತೋರದಿರುವ ಸಾಧ್ಯತೆ ಇದೆ.

ಹೀಗಾಗಿ ರಾಜ್ಯ ಸರಕಾರವು ರಾಜ್ಯದ ಬೊಕ್ಕಸದ ಹಣವನ್ನು ಬಳಸಿ ಸಂಕಷ್ಟದಲ್ಲಿರುವ ರೈತರ ಹಾಗೂ ಕೂಲಿ ಕಾರ್ಮಿಕರಿಗೆ ಪರಿಹಾರ ನೀಡಬೇಕಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ಫಸಲಿಗೆ ಬಂದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ರಾಜ್ಯದ ಸ್ಥಿತಿ ಕೇಂದ್ರ ಸರಕಾರಕ್ಕೂ ಗೊತ್ತಿದೆ. ಕೇಂದ್ರ ಕೂಡ ಸಮಿತಿ ಕಳಿಸಿ, ಪರಿಶೀಲನೆ ನಡೆಸಿ ವರದಿ ಪಡೆಯಲು ಸಿದ್ಧತೆ ನಡೆಸಿದೆ. ಆದರೆ ಅಲ್ಲಿಂದ ಪರಿಹಾರ ಬರುವ ದಿನ ಹೇಳಲಾಗುವುದಿಲ್ಲ. ಹೀಗಾಗಿ ರಾಜ್ಯ ಸರಕಾರವು ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿ, ಅದೇ ಹಣವನ್ನು ಪರಿಹಾರ ನೀಡಿದರೆ ರೈತರಿಗೆ ಅನುಕೂಲ ಆಗುತ್ತದೆ. ಇಲ್ಲವಾದರೆ ರೈತರ ಪರಿಸ್ಥಿತಿ ಮತಷ್ಟು ಚಿಂತಾಜನಕ ಆಗುವುದರಲ್ಲಿ ಅನುಮಾನವೇ ಇಲ್ಲ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಽವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತಲಾಗಿದೆ. ಪ್ರತಿಪಕ್ಷಗಳು ಕೂಡ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿ, ಪರಿಹಾರ ನೀಡಿದರೆ ತಮ್ಮ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿವೆ. ಹೀಗಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟ ಕೂಡಲೇ ರೈತರಿಗೆ ಪರಿಹಾರ ನೀಡುವತ್ತ ಗಮನ ಹರಿಸಬೇಕು. ಅಲ್ಲದೆ, ಕರೋನಾದಿಂದಾಗಿ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಪರಿಹಾರ ಘೋಷಣೆ ಮಾಡಿದರೂ ಈವರೆಗೂ ಯಾರಿಗೂ ತಲುಪಿಲ್ಲ. ಅದಕ್ಕೆ ಕಾರಣ ಅನೇಕರಿಗೆ ಹೇಗೆ, ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲ.

ಹೀಗಾಗಿ ಕೂಡಲೇ ರಾಜ್ಯ ಸರಕಾರವು ಆಯಾ ಗ್ರಾಮ ಲೆಕ್ಕಾಽಕಾರಿ ಮೂಲಕ ಅರ್ಜಿ ಪಡೆದು, ಕರೋನಾದಿಂದ ಮೃತಪಟ್ಟವರ ಕುಟುಂಬಗಳ ಸದಸ್ಯರ ಖಾತೆಗೆ ಒಂದೇ ಕಂತಿನಲ್ಲಿ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು.