Saturday, 14th December 2024

ಸೀಮೆಎಣ್ಣೆ ಸಂಪೂರ್ಣ ಸ್ಥಗಿತ ಬೇಡ

ಜನರ ಆರೋಗ್ಯ, ಪರಿಸರ ಮಾಲಿನ್ಯ ತಡೆಯುವ ಸುದುದ್ದೇಶದಿಂದ ರಾಜ್ಯ ಸರಕಾರ ಕಳೆದೊಂದು ವರ್ಷದಿಂದ ಸೀಮೆಎಣ್ಣೆ ಪೂರೈಕೆ ಸಂಪೂರ್ಣ ಸ್ಥಗಿತ ಗೊಳಿಸಿದ್ದು, ಗ್ರಾಮೀಣ ಭಾಗದಲ್ಲಿ ಜನರು ಪರಿತಪಿಸುವಂತಾಗಿದೆ.

ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ ಕಾರದ ಉಜ್ವಲ ಯೋಜನೆಯನ್ನು ಮಾರ್ಪಡಿಸಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿ ಮನೆಗೆ ಉಚಿತ ಎಲ್‌ಪಿಜಿ ಸಿಲಿಂಡರ್ ಹಾಗೂ ‘ಬೆಳಗು’ ಯೋಜನೆಯಡಿ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆದ್ಯತೆ ನೀಡುವ ಮೂಲಕ ಸೀಮೆಎಣ್ಣೆ ಮೇಲಿನ ಅವಲಂಬನೆಯನ್ನು ಹಂತಹಂತವಾಗಿ ಬಿಡುವಂತೆ ಮಾಡಿದೆ. ಆದರೆ, ವಿದ್ಯುತ್ ಕೈಕೊಟ್ಟಾಗ, ಅಡುಗೆ ಅನಿಲ ಸಿಲಿಂಡರ್ ಖಾಲಿಯಾದ ಸಂದರ್ಭದಲ್ಲಿ ಬಳಸಲಾದರೂ ಸೀಮೆ ಎಣ್ಣೆ ಯನ್ನು ಒದಗಿಸಬೇಕಾಗಿದೆ.

ಅಲ್ಲದೇ, ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿರುವ ಅಡುಗೆ ಅನಿಲ ದರದಿಂದ ಕಂಗೆಟ್ಟಿರುವ ಬಡವರು, ಕೂಲಿ ಕಾರ್ಮಿಕರಿಗೆ ಸೀಮೆಎಣ್ಣೆಯೇ ಗತಿ. ಅಲ್ಲದೆ, ಕೇಂದ್ರ ಸರಕಾರವು ಅಡುಗೆ ಅನಿಲ ಬಳಕೆದಾರರಿಗೆ ನೀಡುತ್ತಿದ್ದ ಸಹಾಯಧನವನ್ನೂ ಸ್ಥಗಿತಗೊಳಿಸಿರುವುದರಿಂದ ಬಡಜನರಿಗೆ ಆರ್ಥಿಕ ಹೊರೆ ಭಾರವಾಗಿ ಪರಿಣ ಮಿಸಿದೆ. ಈ ಕಾರಣಕ್ಕೆ ಸೀಮೆಎಣ್ಣೆ ಪೂರೈಕೆ ಪುನರಾರಂಭಿಸಬೇಕಿದೆ. ಹಳ್ಳಿಗಳಲ್ಲಿ ಗಾಳಿ-ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಾಗ, ವಿದ್ಯುತ್ ಟ್ರಾನ್ಸಾರ್ಮರ್ ಸುಟ್ಟು ವಿದ್ಯುತ್ ಕೈಕೊಟ್ಟಾಗ ಮನೆಯಲ್ಲಿ ದೀಪ ಬೆಳಗಿಸಲು ನೆರ ವಾಗುತ್ತಿದ್ದ ಸೀಮೆ ಎಣ್ಣೆ ಇದೀಗ ಎಲ್ಲಿಯೂ ಲಭಿಸದ ಕಾರಣ ಗ್ರಾಮೀಣ ಜನರು ಕತ್ತಲೆಯಲ್ಲಿ ರಾತ್ರಿ ಕಳೆಯುವಂತಾಗಿದೆ.

ಅಲ್ಲದೇ, ರಾತ್ರಿ ವೇಳೆ ವಿದ್ಯುತ್ ಕೈಕೊಡುವುದರಿಂದ ವಿದ್ಯಾರ್ಥಿಗಳ ಓದಿಗೂ ಅಡಚಣೆಯಾಗುತ್ತಿದೆ. ಕೃಷಿ ಪಂಪ್‌ಸೆಟ್ ಬಳಕೆಗೂ ಸೀಮೆಎಣ್ಣೆ ಅನುಕೂಲವಾಗು ತ್ತಿತ್ತು. ಆದರೆ, ಇದೀಗ ಕಡಿಮೆ ದರದ ಸೀಮೆಎಣ್ಣೆ ಬದಲು ಅಽಕ ದರದ ಡೀಸೆಲ್ ಬಳಕೆ ರೈತರ ಪಾಲಿಗೆ ದುಬಾರಿಯಾಗಿದೆ. ಸರಕಾರ ಪಡಿತರ ಚೀಟಿವುಳ್ಳವರಿಗೆ ಮೊದಲಿಗೆ 10 ಲೀಟರ್ ಸೀಮೆ ಎಣ್ಣೆ ವಿತರಣೆ ಮಾಡುತ್ತಿತ್ತು. ನಂತರ 5 ಲೀಟರ್, 3 ಲೀಟರ್ ಕೊನೆಗೆ ಒಂದು ಲೀಟರ್ ಸೀಮೆಎಣ್ಣೆ ವಿತರಣೆ ಮಾಡುತ್ತಿತ್ತು. ಇದೀಗ ಸಂಪೂರ್ಣ ಬಂದ್ ಮಾಡಿದೆ. ಹೀಗಾಗಿ ಬಡವರ ಮನೆಗಳು ಕತ್ತಲುಮಯವಾಗಿವೆ.

ಬಡ ಕೂಲಿಕಾರರು ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ಕಾರಣ ಅಡುಗೆಗೆ ಬಳಕೆ ಮಾಡುವ ದುಬಾರಿ ಬೆಲೆಯ ಎಣ್ಣೆಯಿಂದ ದೀಪ ಹಚ್ಚುತ್ತಿದ್ದಾರೆ. ಹೀಗಾಗಿ, ಸರಕಾರ ಕನಿಷ್ಠ ಪ್ರಮಾಣದ ಬಳಕೆಗಾದರೂ ಸೀಮೆಎಣ್ಣೆ ಪೂರೈಸಬೇಕಿದೆ.