ಕರೋನಾ ಎರಡನೇ ಅಲೆಯ ಸಮಯದಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ಅನಿವಾರ್ಯತೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರವಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮುಂದಿನ ಜೀವನದ ಮಹತ್ವದ ಘಟ್ಟವಾಗಿರುವುದರಿಂದ ನಡೆಸು ವುದು ಸೂಕ್ತ ಎನ್ನುವ ಮಾತನ್ನು ಅನೇಕ ಶಿಕ್ಷಣ ತಜ್ಞರು ಹೇಳಿದ್ದಾರೆ.
ಆದರೆ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳನ್ನು ಕೋಣೆಯಲ್ಲಿ ತಾಸುಗಟ್ಟಲೇ ಕೂರಬೇಕು. ಇದರೊಂದಿಗೆ ಮನೆಯಿಂದ ಆಚೆ ಬಂದು ವಾಪಸು ಹೋಗಲೇಬೇಕು. ಈ ವೇಳೆ ಕರೋನಾ ಹಬ್ಬುವ ಆತಂಕ ವಿರುತ್ತದೆ ಎನ್ನುವುದು ಅನೇಕ ಪೋಷಕರ ವಾದವಾಗಿದ್ದು, ಇದು ಸರಿಯಾಗಿಯೂ ಇದೆ. ಇದೀಗ ಸರಕಾರಗಳು ಆರೋಗ್ಯ ಮತ್ತು ಶಿಕ್ಷಣದ ನಡುವೆ ಯಾವುದನ್ನು ಆರಿಸಿಕೊಳ್ಳಲು ಬೇಕು ಎನ್ನುವ ತೊಳಲಾಟದಲ್ಲಿರುವುದು ಸುಳ್ಳಲ್ಲ.
ಈ ವಿಷಯದಲ್ಲಿ ಕರ್ನಾಟಕದ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರು ಪರೀಕ್ಷೆಗಳನ್ನು ನಡೆಸಲೇಬೇಕು ಎನ್ನುವ ವಾದವನ್ನು ಮುಂದಿಟ್ಟಿದ್ದಾರೆ. ಳೆದ ಬಾರಿಯೂ ಇದೇ ರೀತಿಯ ಸಂಕಷ್ಟ ಸಮಯದಲ್ಲಿಯೇ ಪರೀಕ್ಷೆಯನ್ನು ನಡೆಸಿರುವುದರಿಂದ ಈ ಬಾರಿಯೂ ಇದೇ ರೀತಿ ಯಶಸ್ವಿಯಾಗಿ ಪರೀಕ್ಷೆ ನಡೆಸುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಆದರಿಲ್ಲಿ ಗಮನಿಸಬೇಕಾದ ವಿಷಯ ಒಂದಿದೆ. ಕಳೆದ ಬಾರಿಗಿಂತ ಈ ಬಾರಿ ಸೋಂಕು ಹಬ್ಬುವ ವೇಗ ಹೆಚ್ಚಾಗಿದೆ. ಆದ್ದರಿಂದ ಕಳೆದ ಬಾರಿಯಂತೆಯೇ ಈ ಬಾರಿಯೂ
ಪರೀಕ್ಷೆ ಕಳೆದ ಬಾರಿಯಂತೆಯೇ ಮಾಡುತ್ತೇವೆ ಎನ್ನುವ ಹುಬ್ಬುತನಕ್ಕೆ ಬಿದ್ದು ಪರೀಕ್ಷೆ ಮಾಡುವ ನಿರ್ಧಾರವನ್ನು ಇಲಾಖೆ ತಗೆದುಕೊಳ್ಳುವುದು ಬೇಡ.
ಪರೀಕ್ಷೆ ನಡೆಸುವುದು ಅನಿವಾರ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅದನ್ನು ನಡೆಸುವುದಕ್ಕೆ ಇರುವ ಮಾರ್ಗೋಪಾಯದ ಬಗ್ಗೆ ತಜ್ಞರಿಂದ ಸರಿಯಾದ ಮಾರ್ಗದರ್ಶನ ಪಡೆಯುವುದು ಸೂಕ್ತ. ಮಕ್ಕಳ ವಿಷಯದಲ್ಲಿ ಸರಕಾರ ಪ್ರತಿಷ್ಠೆ ಬೀಳುವುದಕ್ಕಿಂತ, ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕಿದೆ.