Sunday, 13th October 2024

ಕನ್ಹಯ್ಯ ಲಾಲ್ ಹತ್ಯೆ ರಾಜಕೀಯ ದಾಳವಾಗದಿರಲಿ

ರಾಜಸ್ಥಾನದ ಉದಯಪುರದಲ್ಲಿ ಟೇಲರ್ ಕನ್ಹಯ್ಯ ಲಾಲ್ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಕೃತ್ಯಕ್ಕೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಉದಯಪುರದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಅಲ್ಲಿ ಕರ್ಫ್ಯೂ ಮತ್ತು ಇತರ ನಿರ್ಬಂಧಗಳನ್ನು ಹೇರಲಾಗಿದೆ.

ರಾಜಸ್ಥಾನದ ಇತರೆಡೆಗಳಲ್ಲಿ ಮತ್ತು ರಾಜ್ಯದ ಹೊರಗಿನ ಕೆಲವು ಸ್ಥಳಗಳಲ್ಲಿ ಕೂಡ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ರಾಜಕೀಯ, ಧರ್ಮ ಮತ್ತು ಸಮುದಾಯಗಳನ್ನೆಲ್ಲ ಮೀರಿ ದೇಶದ ಎಡೆ ಈ ಕೃತ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ಪೊಲೀಸರು ಕೃತ್ಯವೆಸಗಿದ ಇಬ್ಬರನ್ನು ಈಗಾಗಲೇ ಬಂಧಿಸಿದ್ದರೂ ಪ್ರತಿಭಟನೆ, ರಸ್ತೆ ತಡೆಗಳು ನಿಲ್ಲುತ್ತಿಲ್ಲ. ಹೀಗಾಗಿ ಈ ಪ್ರಕರಣದ ತನಿಖೆ ಮತ್ತು ವಿಚಾರಣೆಯು ಅತ್ಯಂತ ತ್ವರಿತವಾಗಿ ನಡೆದು ದೇಶ ದಾದ್ಯಂತ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕಿದೆ.

ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಹೇಳಲಾಗಿದೆ. ಆ ನಿಟ್ಟಿನಲ್ಲೂ ತನಿಖೆ ನಡೆಯಬೇಕಿದೆ. ಹತ್ಯೆಯ ಭೀಕರ ಕೃತ್ಯದ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವುಗಳನ್ನು ನೋಡಿದ ಜನರು ಕೆರಳುವಂತಾಗಿದೆ.

ಅದರಿಂದ ದೇಶದೆಲ್ಲೆಡೆ ಮತ್ತಷ್ಟು ಸಂಘರ್ಷ ಸೃಷ್ಟಿಸುವ ಅಪಾಯ ಇದೆ. ಹಾಗಾಗಿ, ಈ ಚಿತ್ರ ಮತ್ತು ವಿಡಿಯೊಗಳು ಹರಿದಾಡುವುದನ್ನು ಸರಕಾರವು ತಡೆಯಬೇಕಿದೆ. ಕೋಮು ಸಂಘರ್ಷ ಮತ್ತು ಹಿಂಸೆಯಿಂದ ದೇಶಕ್ಕೆ ಯಾವ ಲಾಭವೂ ಇಲ್ಲ, ಬದಲಿಗೆ ನಷ್ಟವೇ ಹೆಚ್ಚು. ಹತ್ಯೆಯಿಂದ ಆಗಬಹುದಾದ ಇತರ ಪರಿಣಾಮಗಳನ್ನು ತಡೆಯಲು ಬೇಕಾದ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು.

ತಪ್ಪು ದಾರಿಗೆ ಎಳೆಯುವಂತಹ ಮಾಹಿತಿ ಹರಿದಾಡದಂತೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು. ತೊಂದರೆಗೆ ಕಾರಣವಾಗ ಬಹುದಾದ ಪ್ರಚೋದನಕಾರಿ ನಡವಳಿಕೆಗೂ ತಡೆ ಒಡ್ಡಬೇಕು. ರಾಜಸ್ಥಾನ ವಿಧಾನಸಭೆಗೆ ಶೀಘ್ರವೇ ಚುನಾವಣೆ ನಡೆಯಲಿರುವುದರಿಂದ
ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಈ ಕೃತ್ಯವನ್ನುಫ್ಕೊಯೂಳ್ಳಲು ಮುಂದಾಗಬಾರದು. ಒಂದು ವೇಳೆ ರಾಜಕಾರಣಿಗಳು ಕೂಡ ಇದನ್ನೇ ತಮ್ಮ ಚುನಾವಣೆ ಅಸ್ತ್ರವಾಗಿಸಿಕೊಂಡರೆ ದೇಶದಲ್ಲಿ ಕೆಟ್ಟ ಸಂಪ್ರದಾಯವೊಂದು ಶುರುವಾಗುತ್ತದೆ.

ಚುನಾವಣೆ ನಡೆಯುವ ರಾಜ್ಯಗಳಲ್ಲೆಲ್ಲ ಕೊಲೆಗಳು ಸಾಮಾನ್ಯವೆಂಬ ವಾತಾವರಣ ಸೃಷ್ಟಿಯಾಗುವ ಅಪಾಯವಿದೆ. ಆದ್ದರಿಂದ ಈ ಸಂದರ್ಭದಲ್ಲಿ ರಾಜಕಾರಣಿ ಗಳ ನಡೆ ಸೂಕ್ಷ್ಮವಾಗಿರಬೇಕು.