Thursday, 12th December 2024

ಮತ್ತೊಂದು ಡೋಸ್ ಲಸಿಕೆ ಅನಿವಾರ್ಯ

ದೇಶಾದ್ಯಂತ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಈಗಾಗಲೇ ಎರಡು ಡೋಸ್ ಪಡೆದವರು ಇದೀಗ ಮತ್ತೊಂದು ಡೋಸ್
ಪಡೆಯುವುದು ಅನಿವಾರ್ಯವಾಗಿದೆ.

ಏಕೆಂದರೆ ಎರಡನೆಯ ಡೋಸ್ ಪಡೆದ ನಾಲ್ಕರಿಂದ ಆರು ತಿಂಗಳ ನಂತರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಎನ್ನಲಾಗಿದೆ. ದೇಶಾದ್ಯಂತ ಬಹುತೇಕರು ಎರಡನೆಯ ಡೋಸ್ ಪಡೆದಿದ್ದು ಆರು ತಿಂಗಳುಗಳ ಹಿಂದೆ. ಹೀಗಾಗಿ, ಈಗ ಇನ್ನೊಂದು ಡೋಸ್ ಪಡೆಯು ವುದು ಅನಿವಾರ್ಯವಾಗಿದೆ. ಕೇಂದ್ರ ಸರಕಾರವು ಏಪ್ರಿಲ್ ೧೦ ರಿಂದಲೇ ೧೮ ವರ್ಷ ಮೇಲ್ಪಟ್ಟ, ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲರೂ ಕೋವಿಡ್‌ನ ಬೂಸ್ಟರ್ ಡೋಸ್ ಅಥವಾ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅವಕಾಶ ವನ್ನೂ ಕಲ್ಪಿಸಿದೆ.

ಆದರೆ ಈವರೆಗೂ ಮೂರನೇ ಡೋಸ್ ಪಡೆಯುವ ವಿಚಾರದಲ್ಲಿ ಸಾರ್ವಜನಿಕರಿಂದ ಬಂದಿರುವ ಸ್ಪಂದನೆ ನೀರಸವಾಗಿದೆ. ಏಕೆಂದರೆ, ಮುನ್ನೆಚ್ಚರಿಕೆ ಡೋಸ್‌ಗಳು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತ್ತಿರುವುದು ಮತ್ತು ಹಣ ಪಾವತಿಸಿ ಪಡೆಯಬೇಕಾಗಿರುವು ದರಿಂದ ಬಹುತೇಕರು ಮೂರನೇ ಡೋಸ್ ಪಡೆಯುತ್ತಿಲ್ಲ. ಲಸಿಕೆಗಳ ಬೆಲೆಯನ್ನು ತಗ್ಗಿಸಲಾಗಿದೆ ಎಂಬುದು ನಿಜವಾದರೂ ಲಸಿಕೆ ನೀಡಿದ್ದಕ್ಕೆ ಆಸ್ಪತ್ರೆಗಳು ಪಡೆಯುವ ಸೇವಾ ಶುಲ್ಕ ಸೇರಿ ಲಸಿಕೆಗೆ ಪಾವತಿಸಬೇಕಿರುವ ವೆಚ್ಚವು ಸಾಮಾನ್ಯರ ಪಾಲಿಗೆ ದೊಡ್ಡ ಮೊತ್ತವಾಗುವು ದರಿಂದ ಲಸಿಕಾಕರಣಕ್ಕೆ ವೇಗ ಸಿಗುತ್ತಿಲ್ಲ.

ಆದ್ದರಿಂದ ಮೂರನೇ ಅಲೆಯ ಆರಂಭದಲ್ಲಿ ಯುನಿಸೆಫ್ ಮತ್ತು ಜಿಎವಿಐ ಕೇಂದ್ರ ಸರಕಾರಕ್ಕೆ ನೀಡಿರುವ ಲಸಿಕೆಗಳನ್ನು ಸರಕಾರಿ ಆಸ್ಪತ್ರೆಗಳಿಗೆ ರವಾನಿಸಬೇಕಿದ್ದು, ಆ ಮೂಲಕ ಸಕಾಲಿಕವಾಗಿ ಅವುಗಳನ್ನು ಬಳಸಬೇಕಿದೆ. ಅಲ್ಲದೇ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸೇರಿ ದಂತೆ ಮತ್ತಿತರ ಸೌಲಭ್ಯಗಳು ಲಭ್ಯವಿರುವಂತೆ ನೋಡಿಕೊಳ್ಳಲು ಸರಕಾರ ಆದೇಶಿಸಬೇಕು. ಜತೆಗೆ ಸಾರ್ವಜನಿಕರು ಮಾಸ್ಕ್,
ಸ್ಯಾನಿಟೈಜರ್, ಸಾಮಾಜಿಕ ಅಂತರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

ಇಷ್ಟೆಲ್ಲ ಎಚ್ಚರಿಕೆ ವಹಿಸಿದ್ದರಿಂದಲೇ ಮೊದಲೆರಡು ಅಲೆಗಳಲ್ಲಿ ಅನಿಭವಿಸಿದ ಸಾವು-ನೋವುಗಳನ್ನು ಮೂರನೇ ಅಲೆಯಲ್ಲಿ ತಪ್ಪಿಸಿ
ದಂತಾಗಿದೆ. ಆದ್ದರಿಂದ ಈಗ ಬರುತ್ತಿರುವ ನಾಲ್ಕನೇ ಅಲೆ ತಡೆಗೂ ಕೋವಿಡ್ ನಿಯಮ ಪಾಲನೆ ಮತ್ತು ಡೋಸ್ ಪಡೆಯುವುದು ಅನಿವಾರ್ಯವಾಗಿದೆ.