Sunday, 15th December 2024

ಮುಖ್ಯಮಂತ್ರಿಯವರ ಪ್ರಶ್ನೆಗೆ ಕೇಂದ್ರ ನಾಯಕರು ಉತ್ತರಿಸಲಿ

ಬರ ಪರಿಹಾರದ ನೆರವು ಪಡೆಯಬೇಕಾದರೆ ರಾಜ್ಯ ಸರಕಾರವು ರಾಜ್ಯ ಹಾಗೂ ಕೇಂದ್ರ ಸರಕಾರದ ಹೆಸರಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯಬೇಕು. ರಾಜ್ಯ ಸರಕಾರ ಜಂಟಿ ಖಾತೆ ತೆರೆದ ಕೂಡಲೇ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದು, ಆ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ತೆರಿಗೆ ಪಾಲು ಪಡೆಯುವಾಗಲೂ ಜಂಟಿ ಖಾತೆ ತೆರೆಯುತ್ತಾರೆಯೇ? ಎಂದು ಕೇಳಿದ್ದಾರೆ.

ನಿಜಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೆ ಕೇಂದ್ರದ ನಾಯಕರು ಉತ್ತರಿಸಬೇಕಿದೆ. ಕರ್ನಾಟಕಕ್ಕೆ ನ್ಯಾಯಸಮ್ಮತವಾಗಿ ಬರಬೇಕಾದ ಜಿಎಸ್‌ಟಿ ಪರಿಹಾರ, ನೆರೆ ಪರಿಹಾರ, ಎಸ್‌ಡಿಆರ್‌ಎ- ಹಾಗೂ ಎನ್‌ಎಸ್‌ಆರ್‌ಎಫ್ ನಿಧಿ ಸಕಾಲಕ್ಕೆ ನೀಡುತ್ತಿಲ್ಲ. ಆದರೆ ಕಾಲಕಾಲಕ್ಕೆ ಇಲ್ಲಿಂದ ತೆರಿಗೆ ಹಣ ಪಾವತಿಯಾಗುತ್ತಲೇ ಇದೆ. ಕರ್ನಾಟಕ ಕೇಂದ್ರ ಸರಕಾರಕ್ಕೆ ೨೦೧೪-೧೫ರಲ್ಲಿ ೬೦,೫೯೫ ಕೋಟಿ, ೨೦೧೫-೧೬ರಲ್ಲಿ ೭೨,೦೪೦ಕೋಟಿ, ೨೦೧೬-೧೭ ರಲ್ಲಿ ೮೫,೯೨೦ ಕೋಟಿ, ೨೦೧೭-೧೮ ರಲ್ಲಿ ೯೮,೪೬೦ ಕೋಟಿ ಮತ್ತು ೨೦೧೮-೧೯ ರಲ್ಲಿ ೧,೧೯,೭೯೬ ಕೋಟಿ ರು. ಗಳನ್ನು ತೆರಿಗೆಯಾಗಿ ನೀಡಿದೆ.

ಆದರೆ ಇಷ್ಟೊಂದು ತೆರಿಗೆ ಕಟ್ಟಿದರು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ನಮ್ಮದೇ ಹಣವನ್ನು ನಮಗೆ ಕೊಡಲು ಹಿಂಜರಿಕೆಯೇಕೆ? ಕಳೆದ ವರ್ಷ ಗಳಲ್ಲಿ ಸರಾಸರಿ ೧೦೦ ಪ್ರತಿಶತ ಹೆಚ್ಚಿನ ತೆರಿಗೆಯನ್ನು ನೀಡಿದ್ದೇವೆ. ಇಡೀ ಭಾರತ ಒಕ್ಕೂಟದಲ್ಲಿಯೇ ೨ನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ಆದರೆ ನಮ್ಮ ಪಾಲಿನ ಹಣ ಕೇಳಿದರೆ ಕೇಂದ್ರ ಸಚಿವರಿಂದ ಇಂತಹ ಬೇಜವಾಬ್ದಾರಿ ಮಾತುಗಳನ್ನು ಕೇಳಬೇಕಾಗಿದೆ. ಇನ್ನು ರಾಜ್ಯದಿಂದ ಆಯ್ಕೆಯಾದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯದ ಪಾಲಿನ ತೆರಿಗೆ ಹಣ, ಬರ ಪರಿಹಾರಗಳನ್ನು ತರಲು ಸಂಪೂರ್ಣ ವಿಫಲರಾಗಿದ್ದಾರೆ.

ಜೇನುಹುಳುಗಳೇ ಸಂಗ್ರಹಿಸಿದ ತುಪ್ಪ, ಆ ಹುಳುಗಳು ಹಸಿದಾಗ ತಿನ್ನಲಾಗದೆ ಮನುಷ್ಯನ ದುರಾಸೆಯಿಂದ ಬಾಟಲಿ ಸೇರಿದಂತೆ ಇಂದಿನ ಸ್ಥಿತಿ ಆಗಿದೆ.