ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿರುವ ಅರಣ್ಯ ಅತಿಕ್ರಮಣದಿಂದಾಗಿ ಮಾನವ – ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ.
ಕಾಡಿನ ಸಮೀಪದ ಪ್ರದೇಶಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ವನ್ಯಜೀವಿಗಳು ಇದೀಗ ನಗರಗಳಲ್ಲಿಯೂ ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿವೆ. ಈ ಬೆಳವಣಿಗೆಯಿಂದ ಅರಣ್ಯನಾಶದ ತೀವ್ರತೆಯನ್ನು ಗಮನಿಸಬಹುದು. ೨೦೧೬ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಆನೆ ದಾಳಿಯಲ್ಲಿ ಐವರು ಮೃತಪಟ್ಟಿದ್ದಲ್ಲದೆ, ಇತ್ತೀಚೆಗೆ ಜನವಸತಿ ಪ್ರದೇಶಗಳಲ್ಲಿ ಆನೆ, ಚಿರತೆ, ಹುಲಿಗಳು ಕಾಣಿಸಿಕೊಳ್ಳತೊಡಗಿವೆ. ಆನೆಗಳ ಹಾವಳಿಯಿಂದ ಬಹಳಷ್ಟು ಕಡೆಗಳಲ್ಲಿ ಬೆಳೆನಷ್ಟ ಸಂಭವಿಸಿದ್ದರೂ ಪರಿಹಾರದ ವಿಳಂಬವಾಗುತ್ತಿದೆ.
ಇದೀಗ ಕಾಡುಪ್ರಾಣಿಗಳ ಹಾವಳಿಯಿಂದ ನಷ್ಟಕ್ಕೊಳಗಾದ ಬೆಳೆಗಾರರಿಗೆ ಶೀಘ್ರವಾಗಿ ಪರಿಹಾರ ವಿತರಿಸಲು ಇ – ತಂತ್ರಾಂಶ ಅಳವಡಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಆಯಾ ವರ್ಷವೇ ಬೆಳೆ ನಷ್ಟ ಪರಿಹಾರ ವಿತರಿಸಲು ವೇಗ ದೊರೆಯಲಿದೆ. ಕಾಡುಪ್ರಾಣಿಗಳಿಂದ ಮೃತಪಡುವ ಹಸು,ಎಮ್ಮೆಯಂತಹ ಸಾಕುಪ್ರಾಣಿಗಳಿಗೆ ೧೦ ಸಾವಿರ, ಕುರಿ ಮೇಕೆಗಳಿಗೆ ೫ ಸಾವಿರ ಹಾಗೂ ಮಾನವ ಹಾನಿಗೆ ಏಳು ಲಕ್ಷ ರು.ವರೆಗೆ ಪರಿಹಾರ ನೀಡಲು ಸರಕಾರ ಚಿಂತನೆ ನಡೆಸಿದೆ.
ಇದೊಂದು ಮಹತ್ವದ ಬೆಳವಣಿಗೆ. ಸರಕಾರದ ಈ ಚಿಂತನೆ ಶೀಘ್ರವಾಗಿ ಅನುಷ್ಠಾನಗೊಳ್ಳುವ ಮೂಲಕ ತೊಂದರೆಗೊಳಗಾದ ಬೆಳೆಗಾರರಿಗೆ ಶೀಘ್ರ ಪರಿಹಾರ ದೊರೆಯುವಂತಾಗಬೇಕಿದೆ. ಇ – ತಂತ್ರಾಂಶ ಅಳವಡಿಕೆ ಹಾಗೂ ಶೀಘ್ರ ಪರಿಹಾರ ನೀಡುವುದರ
ಜತೆಗೆ ಮತ್ತಷ್ಟು ಸುಧಾರಿತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕಾಡಿನಂಚಿನ ಭಾಗಗಳಲ್ಲಿ ತಡೆ ವ್ಯವಸ್ಥೆಗಳನ್ನು ಹೆಚ್ಚಿಸುವ ಮೂಲಕ ಅರಣ್ಯ ರಕ್ಷಣೆ ಹಾಗೂ ಪ್ರಾಣಿಗಳ ಹಾವಳಿ ತಡೆಯುವ ತಡೆಗೆ ಮತ್ತಷ್ಟು ಆದ್ಯತೆ ಹೆಚ್ಚಾಗಬೇಕಿರುವುದು ಇಂದಿನ ಅವಶ್ಯ.