ಐದು ಗ್ಯಾರಂಟಿ ಭರವಸೆಯೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಸರಕಾರಕ್ಕೆ, ಇದರ ಅನುಷ್ಠಾನವೇ ಬಹುದೊಡ್ಡ ಸವಾಲಾಗಿದೆ. ಈ ಎಲ್ಲ ಯೋಜನೆ ಜಾರಿಗೆ ೨೫ರಿಂದ ೩೦ ಸಾವಿರ ಕೋಟಿ ರು. ಅನುದಾನದ ಮಾತನ್ನು ಆಡಿದ್ದ ಆರ್ಥಿಕ ಇಲಾಖೆ ಅಧಿಕಾರಿಗಳು ಇದೀಗ ೫೦ ಸಾವಿರ ಕೋಟಿ ರು. ಎಂದು ಅಂದಾಜಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಕರ್ನಾಟಕದ ಬಜೆಟ್ ಮೂರು ಲಕ್ಷ ಕೋಟಿ ರು. ಮೀರಿದ್ದರೂ ಇದರಲ್ಲಿ ಶೇ.೬೫ರಷ್ಟು ಈಗಾಗಲೇ ಬದ್ಧತಾ ವೆಚ್ಚಕ್ಕೆ ವಿನಿಯೋಗವಾಗುತ್ತಿದೆ. ಅಂದರೆ ಇನ್ನುಳಿದ ಒಂದು ಲಕ್ಷ ಕೋಟಿ ಅನುದಾನದಲ್ಲಿ ಅಭಿವೃದ್ಧಿ, ನೂತನ ಯೋಜನೆ, ತುರ್ತು ಪರಿಸ್ಥಿತಿ ಸೇರಿದಂತೆ ಎಲ್ಲ ರೀತಿಯ ಖರ್ಚುಗಳನ್ನು ನೋಡಿ ಕೊಳ್ಳಬೇಕು. ಇದಿಷ್ಟೇ ಅಲ್ಲದೇ ಈಗಾಗಲೇ ಸರಕಾರಿ ನೌಕರರಿಗೆ ಶೇ.೪ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಲಾಗಿದ್ದು, ಇಂದಲ್ಲ ನಾಳೆ ಏಳನೇ ವೇತನ ಆಯೋಗ ವನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆ ಸರಕಾರ ಮುಂದಿದೆ. ಇದರಿಂದಾಗಿ ಬದ್ಧತಾ ವೆಚ್ಚ ಇನ್ನಷ್ಟು ಹೆಚ್ಚಾಗು ವುದು ನಿಶ್ಚಿತ.
ಹೀಗಿರುವಾಗ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಐದು ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಇಷ್ಟು ದೊಡ್ಡ ಪ್ರಮಾಣದ ಅನುದಾನವನ್ನು ಪ್ರತಿವರ್ಷ ಎತ್ತಿಟ್ಟರೆ ಇತರೆ ಅಭಿವೃದ್ಧಿ ಕಾಮಗಾರಿ, ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ಎಲ್ಲಿಂದ ತರಬೇಕು? ಎನ್ನುವುದು ಈಗಿರುವ ಬಹು ದೊಡ್ಡ ಪ್ರಶ್ನೆಯ. ಏಕರೂಪ ತೆರಿಗೆ ಸಂಗ್ರಹವಿಲ್ಲದಿದ್ದರೆ, ರಾಜ್ಯ ಸರಕಾರಗಳಿಗೆ ಹೆಚ್ಚುವರಿ ತೆರಿಗೆ ಹೇರಿ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವ ಅವಕಾಶವಿತ್ತು. ಆದರೀಗ ಜಿಎಸ್‌ಟಿ ಬಳಿಕ ಈ ಅವಕಾಶ ತೀರಾ ಸಣ್ಣ ಪ್ರಮಾಣದಲ್ಲಿ ಮಾತ್ರ ಲಭ್ಯವಿದೆ. ಆದ್ದರಿಂದ ರಾಜ್ಯ ವ್ಯಾಪ್ತಿಯಲ್ಲಿ ಬರುವ ತೆರಿಗೆಗಳಿಂದ, ಗ್ಯಾರಂಟಿ ಯೋಜನೆಗಳು ಬಯಸುವಷ್ಟು ಅನುದಾನವನ್ನು ಒಟ್ಟುಗೂಡಿಸುವುದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇತ್ತ ಕೊಟ್ಟಿರುವ ಗ್ಯಾರಂಟಿ ಯೋಜನೆಗಳು ಹಾಗೂ ಇನ್ನೊಂದು ಕಡೆ ಆರ್ಥಿಕ ಶಿಸ್ತು ಮೀರುವ ಆತಂಕ ಎದುರಾಗಿದೆ. ೧೩ ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಈ ಹಿಂದೆ ಆರ್ಥಿಕ ಇಲಾಖೆಯನ್ನು ನಿರ್ವಹಿಸಿದಕ್ಕಿಂತ ಸವಾಲಿನಿಂದ ಎರಡನೇ ಬಾರಿಯ ಮುಖ್ಯಮಂತ್ರಿ ಹುದ್ದೆ ಕೂಡಿರುತ್ತದೆ ಎನ್ನುವುದಂತೂ ಸ್ಪಷ್ಟ.