Thursday, 12th December 2024

Editorial: ದರ್ಶನ್ ಪ್ರಕರಣ ಪಾಠವಾಗಲಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ೧೬ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ ಪ್ರಕರಣವೀಗ ವಿಚಾರಣೆಯ ಹಂತಕ್ಕೆ ಬಂದಿದೆ. ೩೯೯೧ ಪುಟಗಳ ಆರೋಪಪಟ್ಟಿಯಲ್ಲಿ ದರ್ಶನ್ ಮತ್ತು ತಂಡ ರೇಣುಕಾಸ್ವಾಮಿಗೆ ನೀಡಿದ ಚಿತ್ರಹಿಂಸೆಯ ಬಗ್ಗೆ ಸವಿವರ ಉಲ್ಲೇಖವಿದೆ.

ಇದನ್ನು ಗಮನಿಸಿದರೆ ಸಾರ್ವಜನಿಕ ಜೀವನದಲ್ಲಿರುವ ಒಬ್ಬ ವ್ಯಕ್ತಿ ಇಷ್ಟೊಂದು ಕ್ರೂರವಾಗಿ ವರ್ತಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ತನ್ನ ಗೆಳತಿ ಪವಿತ್ರಾ ಗೌಡಳಿಗೆ ಅಶ್ಲೀಲ ಸಂದೇಶ ರವಾನಿಸಿದ ರೇಣುಕಾಸ್ವಾಮಿ ಮೇಲೆ ದರ್ಶನ್ ಸಿಟ್ಟು ಇಷ್ಟೊಂದು ವಿಕೋಪಕ್ಕೆ ಹೋಗುವಾಗ ಅಲ್ಲಿದ್ದ ಯಾರೊ ಬ್ಬರೂ ಮಧ್ಯಪ್ರವೇಶಿಸಿ ಕೊಲೆ ಕೃತ್ಯ ತಪ್ಪಿಸುವ ಮಾಡಿಲ್ಲ ಎನ್ನುವುದು ಗಮನಾರ್ಹ. ಹಾಗೆ ನೋಡಿದರೆ ಕೊಲೆಯಾದ ರೇಣುಕಾಸ್ವಾಮಿಯೂ ನಟನ ಮೇಲಿನ ಅಭಿಮಾನಕ್ಕಾಗಿ, ಆತನ ಕೌಟುಂಬಿಕ ಜೀವನ ಹಾಳಾಗ ಬಾರದೆಂಬ ಉದ್ದೇಶದಿಂದಲೇ ಈ ಕುಕೃತ್ಯ ಎಸಗಿದ್ದ.

ಆದರೆ ಸಾಮಾನ್ಯ ವ್ಯಕ್ತಿಯೊಬ್ಬ ಸತ್ತರೂ ತನಗೆ ಏನೂ ಆಗದು, ಕೊಲೆ ಮಾಡಿಯೂ ತಾನು ಕಾನೂನಿನ ಕೈಯಿಂದ ಪಾರಾಗಬಲ್ಲೆ ಎಂಬ ದರ್ಶನ್ ಅಹಂಕಾರ ಮತ್ತು ಹಣದ ಮದ ಈ ಕೃತ್ಯಕ್ಕೆ ಮೂಲ ಪ್ರೇರಣೆ ಎನ್ನುವುದು
ಸುಸ್ಪಷ್ಟ. ತನ್ನ ಪತ್ನಿ ವಿಜಯಲಕ್ಷ್ಮಿ ಮೇಲೆ ತೀವ್ರ ಸ್ವರೂಪದ ಹಲ್ಲೆ ನಡೆಸಿ, ಸಿಗರೇಟಿನಿಂದ ಸುಟ್ಟ ಸಂದರ್ಭದಲ್ಲಿ ದರ್ಶನ್ ಮೊದಲ ಬಾರಿ ಜೈಲುಪಾಲಾಗಿದ್ದರು. ಅಂದು ಈ ಪ್ರಕರಣ ತಾರ್ಕಿಕ ಅಂತ್ಯ ಕಂಡು ದರ್ಶನ್ ಗೆ ಶಿಕ್ಷೆ ಯಾಗಿದ್ದರೆ, ಈ ನಟನಿಗೆ ಕಾನೂನಿನ ಬಗ್ಗೆ ಭಯ, ಗೌರವ ಇರುತ್ತಿತ್ತು.

ಆದರೆ ತಪ್ಪಿನ ಮೇಲೆ ತಪ್ಪುಗಳನ್ನು ಮಾಡಿದರೂ, ಲಕ್ಷಾಂತರ ಅಭಿಮಾನಿಗಳ ರಕ್ಷೆ ತನಗಿದೆ ಎಂಬ ಹುಂಬತನ ದಲ್ಲಿ ದರ್ಶನ್ ಮಾಡಬಾರದ ಕೆಲಸ ಮಾಡಿದಂತಿದೆ. ಈ ಪ್ರಕರಣದಲ್ಲಿ ನೀಡುವ ಶಿಕ್ಷೆ ಇಡೀ ಸಮಾಜಕ್ಕೆ ಸಂದೇಶ ರವಾನಿಸುವಂತಿ ರಬೇಕು. ಎಲ್ಲೋ ಕುಳಿತು, ನಕಲಿ ಐಡಿ ಸೃಷ್ಟಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಮನಬಂದಂತೆ ಕಮೆಂಟ್ ಮಾಡುವವರಿಗೂ ಈ ಪ್ರಕರಣ ಪಾಠವಾಗಬೇಕು. ಇಂಥವರ ಮೇಲೂ ಪೊಲೀಸರು
ಕಠಿಣ ಕ್ರಮ ಜರುಗಿಸಬೇಕು.