Tuesday, 10th December 2024

Editorial: ಮಹದಾಯಿ ವಿಚಾರದಲ್ಲಿ ತಾರತಮ್ಯ

ಅಂತಾರಾಜ್ಯ ಗಡಿ ಮತ್ತು ನದಿ ನೀರಿನ ವ್ಯಾಜ್ಯಗಳು ಬಂದಾಗ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಮಹದಾಯಿ ವಿಚಾರದಲ್ಲಿ ಇದು ಮತ್ತೊಮ್ಮೆ ಸ್ಪಷ್ಟವಾಗಿದೆ. ಕುಡಿಯುವ ನೀರಿಗಾಗಿ ರೂಪಿಸಿರುವ ಈ
ಯೋಜನೆಗೆ ಅನುಮತಿ ಕೋರಿ ಕಳೆದ ಎರಡು ದಶಕಗಳಿಂದ ರಾಜ್ಯ ಹೋರಾಡುತ್ತಲೇ ಬಂದಿದೆ.

ಮೊದಲು ಯೋಜನೆಗೆ ಒಪ್ಪಿದ್ದ ಗೋವಾ ಸರಕಾರ, ನಂತರ ರಾಜಕೀಯ ಕಾರಣಗಳಿಗಾಗಿ ಇದನ್ನು ವಿರೋಧಿಸಿತು.
ಕೊನೆಗೆ ಸುಪ್ರೀಂಕೋರ್ಟ್ ಆದೇಶದಂತೆ ನ್ಯಾಯಾಧೀಕರಣ ರಚನೆಯಾಯಿತು. ನ್ಯಾಯಮಂಡಳಿಯು ೨೦೧೮ರ ಆಗಸ್ಟ್ ನಲ್ಲಿ ೩.೯೦ ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ತೀರ್ಪು ನೀಡಿದೆ.

ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ೨೦೨೨ರ ಡಿಸೆಂಬರ್‌ನಲ್ಲಿ
ಅನುಮೋದನೆ ನೀಡಿದೆ. ಇದರಲ್ಲಿ ಕಳಸಾ ನಾಲಾ ತಿರುವು ಯೋಜನೆಗೆ ೧.೭೮ ಟಿಎಂಸಿ ಅಡಿ ಮೀಸಲಿಡಲಾಗಿದೆ. ಇದಾದ ಬಳಿಕ ಕಳಸಾ ನಾಲಾ ತಿರುವು ಯೋಜನೆಗೆ ೨೬.೯೨ ಹೆಕ್ಟೇರ್ ಅರಣ್ಯ ಭೂಮಿ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗೆ ೨೨.೮೦ ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲು ಅನುಮೋದನೆ ಕೋರಿ ರಾಜ್ಯ ಸರಕಾರ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಸಚಿವಾಲಯಕ್ಕೆ ಪ್ರಸ್ತಾಪ ಸಲ್ಲಿಸಿತ್ತು.

ಆದರೆ ವನ್ಯಜೀವಿ ಧಾಮದ ಮೂಲಕ ಕರ್ನಾಟಕವು ನೀರು ಕೊಂಡೊಯ್ಯುತ್ತಿದೆ ಎಂಬ ಗೋವಾದ ಹೊಸ ತಗಾದೆ ಹಿನ್ನೆಲೆಯಲ್ಲಿ ಸಚಿವಾಲಯದ ಒಪ್ಪಿಗೆ ಇನ್ನೂ ಸಿಕ್ಕಿಲ್ಲ. ಇದೀಗ ಕರ್ನಾಟಕದ ಮೂಲಕ ಹಾದು ಹೋಗಲಿರುವ ಗೋವಾದ ೪೦೦ ಕೆವಿ ವಿದ್ಯುತ್ ಪೂರೈಕೆ ಯೋಜನೆಗೆ ಪರಿಸರ ಸಚಿವಾಲಯ ಅನುಮತಿ ಕೊಟ್ಟಿದೆ. ಈ ಯೋಜನೆ ಯಲ್ಲಿ ಕರ್ನಾಟಕದ ೪೩೫ ಎಕರೆ ಅರಣ್ಯ ಭೂಮಿ ಬಳಕೆಯಾಗಲಿದೆ. ಇದು ರಾಷ್ಟ್ರೀಯ ಮಹತ್ವದ ಯೋಜನೆ ಯಾಗಿದ್ದು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸದಂತೆ ಸ್ವತ: ಪ್ರಧಾನಿ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಮಹದಾಯಿ ಯೋಜನಾ ಪ್ರದೇಶದ ಅಧ್ಯಯನಕ್ಕಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ತಜ್ಞರ ತಂಡ ವನ್ನು ಕಳುಹಿಸಿತ್ತು.

ಆದರೆ ಪ್ರಾಧಿಕಾರವು ಈ ತನಕ ತನ್ನ ಅಂತಿಮ ಅಭಿಪ್ರಾಯ ತಿಳಿಸಿಲ್ಲ. ಗೋವಾದ ವಿಚಾರದಲ್ಲಿ ಆಕ್ಷೇಪವೆತ್ತದ ಪ್ರಾಧಿಕಾರ ಕರ್ನಾಟಕದ ಅರಣ್ಯ ಭೂಮಿ ಬಳಕೆ ವಿಚಾರದಲ್ಲಷ್ಟೇ ತಕರಾರು ತೆಗೆದಿದೆ. ರಾಜ್ಯದ ಸಂಸದರು
ಪಕ್ಷಭೇದ ಮರೆತು ಕೇಂದ್ರದ ಈ ನಿಲುವನ್ನು ಖಂಡಿಸಬೇಕು. ಮಹದಾಯಿ ಯೋಜನೆಗೆ ತಕ್ಷಣ ಅನುಮತಿ ನೀಡು ವಂತೆ ಒತ್ತಡ ಹೇರಬೇಕು.