Thursday, 12th September 2024

Editorial: ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ

election

೩೭೦ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ಚುನಾವಣೆಗೆ ಸಜ್ಜಾಗಿದೆ. ನ್ಯಾಷನಲ್ ಕಾನರೆನ್ಸ್ , ಕಾಂಗ್ರೆಸ್, ಪ್ಯಾಂಥರ್ಸ್ ಪಕ್ಷ ಮತ್ತು ಸಿಪಿಎಂ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿದರೆ ಪಿಡಿಪಿ ಮತ್ತು ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ಮುಂದಾಗಿವೆ. ಬಿಜೆಪಿ ೯೦ ಕ್ಷೇತ್ರಗಳ ಪೈಕಿ ೬೦ರಿಂದ ೭೦ ಕ್ಷೇತ್ರ ಗಳಲ್ಲಿ ಕಣಕ್ಕಿಳಿಯುವ ಸೂಚನೆ ನೀಡಿದೆ.

ಸೆ.೧೮ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಎಲ್ಲ ಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಿವೆ. ಆಯಾ ಪಕ್ಷಗಳ ಪ್ರಣಾಳಿಕೆಯೂ ಹೊರ ಬಿದ್ದಿದೆ. ಚುನಾವಣೆಪೂರ್ವ ಸಮೀಕ್ಷೆಗಳ ಪ್ರಕಾರ ನ್ಯಾಷನಲ್ ಕಾನರೆನ್ಸ್ ಮತ್ತು ಕಾಂಗ್ರೆಸ್ ನೇತೃತ್ವದ ‘ಇಂಡಿಯ’ ಮೈತ್ರಿಕೂಟ ಬಹುಮತ ಗಳಿಸುವುದು ನಿಚ್ಚಳವಾಗಿದೆ. ಪಕ್ಷ ಯಾವುದೇ ಇರಲಿ ದೇಶದ ಹಿತ ಮುಖ್ಯ. ಅದರಲ್ಲೂ ದೀರ್ಘಕಾಲದಿಂದ ಪಾಕ್ ಪ್ರೇರಿತ ಉಗ್ರರ ಉಪಟಳದಿಂದ ನಲುಗಿರುವ ಜಮ್ಮು-ಕಾಶ್ಮೀರದ ವಿಚಾರದಲ್ಲಿ ರಾಷ್ಟ್ರೀಯ ಸುರಕ್ಷತೆಗೆ ಆದ್ಯತೆ ನೀಡುವುದು ಅತ್ಯಗತ್ಯ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಚುನಾವಣಾ ಪ್ರಚಾರದ ವೇಳೆ, ಇಂಡಿಯಾ ಮೈತ್ರಿಕೂಟ ಕಣಿವೆ ರಾಜ್ಯಕ್ಕೆ ಮತ್ತೆ ರಾಜ್ಯದ ಸ್ಥಾನಮಾನವನ್ನು ಖಚಿತಪಡಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಆದರೆ ವಿವಾದಿತ ೩೭೦ನೇ ವಿಧಿಯ ಮರುಸ್ಥಾಪನೆ ಬಗ್ಗೆ ಅವರು ಇದುವರೆಗೆ ಏನೂ ಹೇಳಿಲ್ಲ. ಆದರೆ ಮಿತ್ರ ಪಕ್ಷ ನ್ಯಾಷನಲ್ ಕಾನರೆನ್ಸ್, ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವ ಜೊತೆಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ೩೭೦ನೇ ವಿಧಿ ಮರುಸ್ಥಾಪನೆ ಸೇರಿದಂತೆ ೧೨ ಗ್ಯಾರಂಟಿಗಳನ್ನು ಘೋಷಿಸಿದೆ.

ಪಿಡಿಪಿ ಕೂಡ ಬಹುತೇಕ ಇದೇ ಮಾದರಿಯ ವಾಗ್ದಾನ ನೀಡಿದೆ. ‘ಅನ್ಯಾಯವಾಗಿ ರದ್ದುಪಡಿಸಲಾದ ಸಾಂವಿಧಾನಿಕ ಖಾತರಿಗಳನ್ನು ಮರುಸ್ಥಾಪಿಸುವ ತನ್ನ ಅನ್ವೇಷಣೆಯಲ್ಲಿ ಪಕ್ಷ ಸಂಕಲ್ಪ ಹೊಂದಿದ್ದು, ಜಮ್ಮು-ಕಾಶ್ಮೀರವನ್ನು ಅದರ ಮೂಲಸ್ಥಿತಿಗೆ ಮರುಸ್ಥಾಪಿಸಲು ಬದ್ಧವಾಗಿದೆ’ ಎಂದು ಪಿಡಿಪಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನಿಸಿಕೊಳ್ಳಬೇಕಾದರೆ ೩೭೦ನೇ ವಿಧಿ ರದ್ದಾಗಲೇಬೇಕಿತ್ತು. ರಾಜ್ಯ ಈಗಾಗಲೇ
ಇದರ ಪ್ರಯೋಜನ ಪಡೆಯುತ್ತಿದೆ. ಹೀಗಿರುವಾಗ ರಾಜಕೀಯ ಉದ್ದೇಶಗಳಿಗಾಗಿ ಯಾವುದೇ ಪಕ್ಷ ೩೭೦ನೇ ವಿಧಿ ಮರುಜಾರಿಯ ಪ್ರಸ್ತಾಪಕ್ಕೆ ಅವಕಾಶ ನೀಡಬಾರದು. ರಾಜಕೀಯ ಹಿತಾಸಕ್ತಿಗಳಿಗಿಂತ ರಾಷ್ಟ್ರೀಯ ಏಕತೆ
ಪರಮೋಚ್ಚ ಎನ್ನುವುದನ್ನು ಎಲ್ಲ ಪಕ್ಷಗಳು ಮನಗಾಣಬೇಕಿದೆ.

Leave a Reply

Your email address will not be published. Required fields are marked *