Friday, 20th September 2024

Editorial: ಸಾಮಾಜಿಕ ಪಿಡುಗಾದ ಆತ್ಮಹತ್ಯೆ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿನ ವಾರ್ಷಿಕ ಏರಿಕೆ ಪ್ರಮಾಣ ಶೇ.2ರಷ್ಟಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿನ ಏರಿಕೆ ಪ್ರಮಾಣ ಶೇ.4ಕ್ಕೆ ತಲುಪಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಯು ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಬೆಳೆಯು ತ್ತಿದೆ ಎಂಬುದನ್ನು ಈ ಅಂಕಿಅಂಶಗಳು ಹೇಳುತ್ತವೆ.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ನಾನಾ ರೀತಿಯ ಕಾರಣಗಳಿವೆ. ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಮತ್ತು ಕೌಟುಂಬಿಕ ಒತ್ತಡಗಳು ಹೆಚ್ಚುತ್ತಿವೆ. ಹಲವರು ಬಲವಂತದ ಕಾರಣಕ್ಕಾಗಿ ತಮಗೆ ಇಷ್ಟವಿಲ್ಲದ ಶೈಕ್ಷಣಿಕ ಕೋರ್ಸ್ ಅಥವಾ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಆರ್ಥಿಕ ಕಾರಣಗಳೂ ಇವೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಶಾಲೆಗಳಲ್ಲಿ ಮಾನಸಿಕ ಆರೋಗ್ಯದ ವಿಷಯವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

ಕ್ರೀಡೆ ಮತ್ತು ಇತರ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಆದರೆ, ಹೆಚ್ಚಿನ ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಒತ್ತು ನೀಡಿ, ಪಠ್ಯೇತರ ಚಟುವಟಿಕೆಗಳನ್ನು ಕಡೆಗಣಿಸುತ್ತಿವೆ. ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆಯ ಸೌಲಭ್ಯ ಒದಗಿಸ ಬಹುದಾದ ಸಾಧ್ಯತೆಯನ್ನು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಹೊಂದಿದ್ದರೂ ಅವು ಆ ಕೆಲಸವನ್ನು
ಮಾಡುತ್ತಿಲ್ಲ. ಈ ವಿಚಾರದಲ್ಲಿ ಪೋಷಕರ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ಮಕ್ಕಳು ತಮ್ಮದೇ ಆದ ವೈಯಕ್ತಿಕ ಜೀವನವನ್ನು ಹೊಂದಿದ್ದಾರೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು.

ಪೋಷಕರ ಇಚ್ಛೆಗೆ ತಕ್ಕಂತೆ ಮಕ್ಕಳು ಜೀವನ ನಡೆಸಬೇಕು ಎಂದು ಅವರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಜಗತ್ತು ದಿನದಿಂದ ದಿನಕ್ಕೆ ಹೆಚ್ಚು ಸ್ಪರ್ಧಾತ್ಮಕವೂ ಮತ್ತು ವ್ಯಕ್ತಿಗತವೂ ಆಗುತ್ತಿದೆ. ಯಶಸ್ಸಿಗೆ ಒಂದೇ ಮಾದರಿ ಇರುವುದಿಲ್ಲ, ಜೀವನವನ್ನು ಹಲವು ಬಗೆಯಲ್ಲಿ ಯಶಸ್ವಿಯಾಗಿ ಮುನ್ನಡೆಸಬಹುದು ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡುವ ಜವಾಬ್ದಾರಿ ಸಮಾಜದ ಮೇಲಿದೆ. ವಿದ್ಯಾರ್ಥಿಗಳ ಆತ್ಮಹತ್ಯೆ ಸಮಸ್ಯೆಯ ಪರಿಹಾರಕ್ಕೆ ವಿವಿಧ ಹಂತಗಳಲ್ಲಿ ಕೆಲಸ ಮಾಡಬೇಕಿದೆ.