Thursday, 19th September 2024

Editorial: ಆತ್ಮಹತ್ಯೆ ಹೆಚ್ಚಳ ಕಳವಳದ ವಿಚಾರ

ರಾಷ್ಟೀಯ ಹಬ್ಬಗಳು, ಧಾರ್ಮಿಕ ಆಚರಣೆಗಳು ಮತ್ತು ನಾಯಕರ ಜಯಂತಿಗೆ ನಿಗದಿತ ದಿನಗಳಿರುವಂತೆಯೇ ವಿಶ್ವ ಆತ್ಮಹತ್ಯೆ ತಡೆ ದಿನವೂ ಇದೆ. ಸೆ.10ರ ದಿನವನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಜಗತ್ತಿನ ಎಲ್ಲ ದೇಶಗಳು ಜಾತಿ-ಮತ, ಭಾಷೆ, ಪ್ರದೇಶ, ಗಡಿಗಳ ಗೊಡವೆ ಇಲ್ಲದೆ ಆಚರಿಸಬಹುದು. ಏಕೆಂದರೆ ಜಗತ್ತಿನ ಭೂಪಟದಲ್ಲಿ ಇದುವರೆಗೆ ಒಬ್ಬರೂ ಆತ್ಮಹತ್ಯೆ ಮಾಡಿಕೊಳ್ಳದ ದೇಶಗಳಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ೭ ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಈ ಪೈಕಿ ಶೇ. ೧೭ರಷ್ಟು ಪ್ರಕರಣಗಳು ಭಾರತದಿಂದ ವರದಿಯಾಗಿದ್ದು, ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ
ಶಕ್ತಿಯಾಗಿ ಗುರುತಿಸಿಕೊಂಡ ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್ ಸಿಆರ್‌ಬಿ) ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ 2022ರಲ್ಲಿ 1.71 ಲಕ್ಷ
ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತೀ ವರ್ಷ ಈ ಪ್ರಮಾಣ ಏರುತ್ತಲೇ ಇದೆ. ದೇಶದಲ್ಲಿ ಕೌಟುಂಬಿಕ ಸಮಸ್ಯೆಗಳ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚು. ಅವಿಭಕ್ತ ಕುಟುಂಬಗಳ ವಿಘಟನೆ ಹೆಚ್ಚುತ್ತಿರು ವಂತೆಯೇ ಆತ್ಮಹತ್ಯೆ ಪ್ರಮಾಣವೂ ಹೆಚ್ಚುತ್ತಿರುವುದು ಗಮನಾರ್ಹ.

ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿಯೇ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಕೌಟುಂಬಿಕ ಹಿಂಸೆ, ಅನಾರೋಗ್ಯ, ಮಾದಕ/ಮದ್ಯವ್ಯಸನ, ವಿವಾಹ ಸಂಬಂಧಿ ಸಮಸ್ಯೆಗಳು, ಪ್ರೇಮ ವ್ಯವಹಾರಗಳು, ಸಾಲ, ಪರೀಕ್ಷೆ ಯಲ್ಲಿ ಅನುತ್ತೀರ್ಣ, ನಿರುದ್ಯೋಗ, ವೃತ್ತಿ ಸಂಬಂಧಿ ಸಮಸ್ಯೆಗಳು, ಆಸ್ತಿ ವಿವಾದ, ಆತ್ಮೀಯರ ಸಾವು, ಬಡತನ, ಅಕ್ರಮ ಸಂಬಂಧ ದೇಶದಲ್ಲಿನ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ. ಇತ್ತೀಚೆಗೆ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳಲ್ಲೂ ಆತ್ಮಹತ್ಯೆ ಪ್ರವೃತ್ತಿ ಕಾಣಿಸಿಕೊಂಡಿರುವುದು ಕಳವಳದ ವಿಚಾರ.

ಎನ್‌ಸಿಆರ್‌ಬಿ ಪ್ರಕಾರ 2021ರಲ್ಲಿ 13089 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ರಾಜಧಾನಿ ಎನಿಸಿದ ರಾಜಸ್ತಾನದ ಕೋಟದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು ಸಾಲು ಸಾಲಾಗಿ ಸಾವಿಗೆ ಶರಣಾಗಿರುವುದು ಸಂಚಲನ ಸೃಷ್ಟಿಸಿದೆ. ಸಮಸ್ಯೆಗಳಿಂದ ನೊಂದ ಜೀವಗಳಿಗೆ ಒಂದಿಷ್ಟು ಆಲಿಸುವ ಕಿವಿಗಳು, ಸಾಂತ್ವನದ ಮತ್ತು ಧೈರ್ಯ ತುಂಬುವ ಮಾತುಗಳು ದೊರೆತರೆ ಅದೆಷ್ಟೋ ಆತ್ಮಹತ್ಯೆ ಪ್ರಕರಣಗಳನ್ನು ತಪ್ಪಿಸಲು ಸಾಧ್ಯವಿದೆ. ತಮಗೆ ಯಾರೂ ಇಲ್ಲ ಎಂದು ತೀರ್ಮಾನಿಸಿ ದುಡುಕಿ ಸಾವಿಗೆ ಶರಣಾಗುವವರ ಸಂಖ್ಯೆ ಹೆಚ್ಚು. ‘ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ’ ಎಂಬ ಡಿವಿಜಿಯವರ ಉಕ್ತಿಯ ಮಹತ್ವವನ್ನು ನಮ್ಮ ಭವಿಷ್ಯದ ಪೀಳಿಗೆಗೆ ಸಾರಿ ಹೇಳಬೇಕಾಗಿದೆ.