Sunday, 15th December 2024

ರಾಜಕೀಯದಿಂದ ಹೊರಗಿರಲಿ ಶಿಕ್ಷಣ

ರಾಜ್ಯದಲ್ಲಿ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಇದೇ ಸೋಮವಾರ ದಿಂದ ಮೇ ೨೯ರಿಂದ ಆರಂಭವಾಗಿದೆ. ನಾಳೆ ೩೧ರಂದು ರಾಜ್ಯದಾದ್ಯಂತ ಏಕಕಾಲಕ್ಕೆ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಮುಂಚಿತ ವಾಗಿ ಶಾಲೆಗೆ ಬಂದು ಸಿದ್ಧತೆ ನಡೆಸಬೇಕು. ಶಾಲೆಗಳನ್ನು ಸಿಂಗರಿಸಬೇಕು. ಹಬ್ಬದ ವಾತಾವರಣ ನಿರ್ಮಿಸಬೇಕು. ೩೧ರಂದು ಶಾಲಾ ಆರಂಭೋತ್ಸವ ಏರ್ಪಡಿಸಿ, ಅಂದಿನಿಂದಲೇ ತರಗತಿ ಆರಂಭಿಸಬೇಕು. ಜೂನ್ ೩೦ರ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣ ಗೊಳಿಸಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದ್ದು, ನಿಜಕ್ಕೂ ಸ್ವಾಗತಾರ್ಹ ಕ್ರಮ.

ದಿನದಿಂದ ದಿನಕ್ಕೆ ನಮ್ಮ ಸರಕಾರಿ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಕುಸಿಯು ತ್ತಿದ್ದು, ಈಗಾಗಲೇ ಬಹುಪಾಲು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಖಾಸಗೀ ಶಾಲೆಗಳತ್ತ ಮುಖಮಾಡಿದ್ದಾರೆ. ಗುಣಮಟ್ಟದ ಶಿಕ್ಷಣದ ಕೊರತೆ ಒಂದೆಡೆಯಾದರೆ, ಕಟ್ಟಡ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯದ ಅಲಭ್ಯತೆ, ಶಿಕ್ಷಕ-ಸಿಬ್ಬಂದಿಯ ಸಂಖ್ಯೆಯ ಕುಸಿತ, ಸಂಪರ್ಕ-ಸಂವಹನದ ಕೊರತೆ, ಪಾಠ-ಪ್ರವಚನಗಳಲ್ಲಿನ ವ್ಯತ್ಯಯ ಇವೆಲ್ಲವೂ ಸರಕಾರಿ ಶಾಲೆಯೆಂದರೆ ಮೂಗುಮುರಿಯುವ ಸನ್ನಿವೇಶ ನಿರ್ಮಾಣ ವಾಗಲು ಕಾರಣ.

ಮೊದಲೇ ಕೊರತೆಯಿರುವ ಶಿಕ್ಷಕರಿಗೆ ಗಣತಿ-ಚುನಾವಣೆ ಸೇರಿದಂತೆ ನೂರೆಂಟು ಹೊಣೆಗಾರಿಕೆಯನ್ನು ಇಂದಿಗೂ ಹೊರಿಸ ಲಾಗುತ್ತಿದ್ದು, ಬೋಧಕ ವರ್ಗಕ್ಕೆ ಶೈಕ್ಷಣಿಕ ಕಾರ್ಯಗಳಿಗೇ ವ್ಯವಧಾನವಿಲ್ಲದಂತಾಗುತ್ತಿರುವುದು ದುರಂತ. ಇದೇ ಕಾರಣಕ್ಕೆ ನಮ್ಮಲ್ಲಿ ಆರೋಗ್ಯ-ಶಿಕ್ಷಣವೆರಡೂ ಕ್ಷೇತ್ರಗಳು ತೀವ್ರ ಖಾಸಗಿಯ ಪೈಪೋಟಿ ಎದುರಿಸುವಂತಾಗಿದ್ದು, ದುಭಾರಿ ಶುಲ್ಕ, ಮನಬಂದಂತೆ ಸುಲಿಗೆಯ ಸಂಕಷ್ಟದ ನಡುವೆಯೂ ನಾಗರಿಕರು ಈ ಎರಡು ಸೇವೆಗಳಿಗೆ ಖಾಸಗಿಯವರ ಮೊರೆ
ಹೋಗುವ ಅನಿವಾರ್ಯ ಸೃಷ್ಟಿಯಾಗಿದೆ.

ಇದು ವ್ಯಾಪಕ ಭ್ರಷ್ಟಾಚಾರಕ್ಕೂ ಕಾರಣವಾಗಿದ್ದು, ಮೂಲಭೂತ ಸೇವೆಯನ್ನೇ ಒದಗಿಸುವಲ್ಲಿ ಸರಕಾರಗಳು ವಿಫಲ ವಾಗಿರುವುದು ದುರದೃಷ್ಟಕರ. ರಾಜಕಾರಣಿಗಳು-ಅಽಕಾರ ವರ್ಗದ ಸ್ವಾರ್ಥ, ಸ್ವ ಹಿತಾಸಕ್ತಿ, ನಿರ್ಲಕ್ಷ್ಯ, ಪೂರ್ವಗ್ರಹಪೀಡಿತ ಮನಃಸ್ಥಿತಿಯೇ ಇದಕ್ಕೆ ಕಾರಣವಾಗಿದ್ದು, ಆಳುವವರೇ ಇದಕ್ಕೆ ನೇರ ಹೊಣೆಗಾರರಾಗುತ್ತಾರೆ. ಹೊಸ ಸರಕಾರದೊಂದಿಗೆ ಆರಂಭವಾಗಿರುವ ಈ ಶೈಕ್ಷಣಿಕ ವರ್ಷದಲ್ಲಾದರೂ ಶೈಕ್ಷಣಿಕ ರಂಗವನ್ನು ರಾಜಕೀಯದಿಂದ ಹೊರಗಿಟ್ಟು ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸುವ ಪ್ರಯತ್ನ ಪ್ರಾಮಾಣಿಕವಾಗಿ ಆಗಲಿ ಎಂಬುದು ಆಶಯ.