ಕನ್ನಡ ಸಾಹಿತ್ಯ ಪರಿಷತ್ನ ಚುನಾವಣೆಯನ್ನು ಮುಂದಿನ ಎರಡು ತಿಂಗಳಲ್ಲಿ ನಡೆಸಬೇಕು ಎಂದು ಧಾರವಾಡದ ಹೈಕೋರ್ಟ್ ಸಂಚಾರಿ ಪೀಠ ಬುಧವಾರ ಆದೇಶ ನೀಡಿದೆ. ಈ ಹಿಂದೆಯೂ ರಾಜ್ಯದ ಬೇರೆ ಬೇರೆ ಮಹಾನಗರ ಪಾಲಿಕೆಗಳ ಚುನಾವಣೆ ನಡೆಸುವಲ್ಲಿ ವಿಳಂಬ ನೀತಿ ಅನುಸರಿಸಿದ್ದ ಸಂದರ್ಭದಲ್ಲೆಲ್ಲಾ ನ್ಯಾಯಾಂಗ ಮಧ್ಯ ಪ್ರವೇಶಿಸಿ, ಆದೇಶ, ನಿರ್ದೇಶನಗಳನ್ನು ನೀಡಿದೆ.
ಇದಕ್ಕೆ ಬಿಬಿಎಂಪಿ ಚುನಾವಣೆಯೂ ಹೊರತಾಗಿಲ್ಲ. ಬಿಬಿಎಂಪಿ ಚುನಾವಣೆ ಕುರಿತ ವ್ಯಾಜ್ಯ ಈಗಾಗಲೇ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿದ್ದು, ಆದೇಶದತ್ತ ಬಾಯಿಬಿಟ್ಟುಕೊಂಡು ನೋಡುವ ಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಗಳು ಪ್ರಜಾಪ್ರಭುತ್ವದ ಆಧಾರ ಸ್ತಂಭ. ಆಡಳಿತ ವ್ಯವಸ್ಥೆಯ ಮೂರು ಮುಖ್ಯ ಸ್ತರಗಳಲ್ಲಿ ಕೆಳಸ್ತರದ ಸ್ಥಳೀಯ ಆಡಳಿತ ಅತಿ ಮುಖ್ಯವಾದುದು. ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ವ್ಯವಸ್ಥೆ ಇದಾಗಿದೆ. ಅಂತಹ ವ್ಯವಸ್ಥೆಯು ಸಮರ್ಥವಾಗಿ ಕಾರ್ಯನಿರ್ವಹಿಸಲು ಕೌನ್ಸಿಲ್ ಬೇಕೇ ಬೇಕು. ಆದರೆ ಬಿಬಿಎಂಪಿಯ ಹಿಂದಿನ ಚುನಾಯಿತ ಕೌನ್ಸಿಲ್ನ ಅಧಿಕಾರದ ಅವಧಿ 2020ರ ಸೆಪ್ಟೆಂಬರ್ 10ಕ್ಕೆ ಕೊನೆಗೊಂಡಿದೆ.
ಆ ಬಳಿಕ ಅಧಿಕಾರಿಗಳ ಆಡಳಿತ ಜಾರಿಯಲ್ಲಿದೆ. ಚುನಾಯಿತ ಕೌನ್ಸಿಲ್ನ ಅವಧಿ ಮುಗಿಯುವುದಕ್ಕೂ ಮುನ್ನವೇ ಹೊಸ ಕೌನ್ಸಿಲ್ ರಚನೆ ಪ್ರಕ್ರಿಯೆ ಪೂರ್ಣ ಗೊಳಿಸುವುದು ಸರಕಾರದ ಹಾಗೂ ಚುನಾವಣಾ ಆಯೋಗದ ಕರ್ತವ್ಯ. ಯಾವುದೇ ಕಾರಣದಿಂದ ಚುನಾವಣೆ ಯನ್ನು ಮುಂದೂಡಿದರೂ ಗರಿಷ್ಠ ಆರು ತಿಂಗಳಿಗೆ ಮಾತ್ರ ಆಡಳಿತಾ ಧಿಕಾರಿಯನ್ನು ನೇಮಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ನ ಆಡಳಿತ ಇಲ್ಲದೇ ಒಂದು ವರ್ಷ ಕಳೆದಿದೆ.
ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಅನೇಕ ರಾಜಕೀಯ ಕಾರಣಗಳಿವೆ ಎಂಬುದು ಬಚ್ಚಿಟ್ಟ ಸತ್ಯ. ಏನೇ ಕಾರಣಗಳಿದ್ದರೂ ಅವುಗಳನ್ನೆಲ್ಲ ಪಕ್ಕಕ್ಕಿಟ್ಟು ಚುನಾವಣೆ ನಡೆಸುವ ಮೂಲಕ ಸ್ಥಳೀಯ ಹಂತದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲ ಪಡಿಸುವ ಇಚ್ಛಾಶಕ್ತಿಯನ್ನು ಸರಕಾರ ಪ್ರದರ್ಶಿಸಬೇಕು. ಎಲ್ಲ ಚುನಾವಣೆಗಳಿಗೂ ನ್ಯಾಯಾಲಯದ ನಿರ್ದೇಶನದತ್ತ ಕಾಯುತ್ತ ಕುಳಿತುಕೊಳ್ಳುವುದು ಚುರುಕು ಸರಕಾರದ ಲಕ್ಷಣವಲ್ಲ.