Sunday, 15th December 2024

ಕರೆಂಟ್ ಶಾಕ್: ಗಾಯದ ಮೇಲೆ ಬರೆ

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೈರಾಣಾಗಿದ್ದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಕರೆಂಟ್
ಶಾಕ್ ಕೊಡಲಾಗಿದೆ.

ಪೆಟ್ರೋಲ್, ಡಿಸೇಲ್, ಗ್ಯಾಸ್, ಅಡುಗೆ ಎಣ್ಣೆ ಹೀಗೆ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆ ಗ್ರಾಹಕರ ಕೈ ಸುಡುತ್ತಿದೆ. ಹೀಗಿರುವಾಗ ವಿದ್ಯುತ್ ದರ ಕೂಡ ಹೆಚ್ಚಳ ಮಾಡ ಲಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಇದೀಗ ರಾಜ್ಯದ ಜನರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರತಿ ಯೂನಿಟ್‌ಗೆ 5 ಪೈಸೆ ಏರಿಕೆ ಮಾಡಿದೆ. ಏಪ್ರಿಲ್ ೧ ರಿಂದಲೇ ದರ ಏರಿಕೆ ಜಾರಿ ಮಾಡಿರುವುದಾಗಿ ಕರ್ನಾಟಕ ವಿದ್ಯುಚ್ಛಕ್ತಿ  ನಿಯಂತ್ರಣ ಆಯೋಗ ತಿಳಿಸಿದೆ.

ಇಷ್ಟು ದಿನ ರಾಜ್ಯದಲ್ಲಿ ವಿದ್ಯುತ್ ಕೊರತೆಯೇ ಇಲ್ಲ ಎನ್ನುತ್ತಿದ್ದ ಸರಕಾರ, ಈಗ ಇದ್ದಕ್ಕಿ ದ್ದಂತೆ ದರ ಏರಿಕೆ ಮಾಡಿದ್ದು ಏಕೆ? ಎಂಬುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ. ಬೇಸಿಗೆಯಲ್ಲಿ ಸಮರ್ಪಕವಾದ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕಾದ ಸರಕಾರ ಬೆಲೆ ಏರಿಕೆ ಮಾಡಿ ರೈತರಿಗೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ. ಇನ್ನೊಂದೆಡೆ ಸಿಮೆಂಟ್, ಕಬ್ಬಿಣದ ದರ ಗಗನಕ್ಕೇರಿದ್ದು, ಬಡವರು, ಮಧ್ಯಮ ವರ್ಗದವರು ಮನೆ ಕಟ್ಟುದ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತೊಂದೆಡೆ ಅಡುಗೆ ಎಣ್ಣೆ ಬೆಲೆ ಹೆಚ್ಚಳದಿಂದಾಗಿ ಆಹಾರ ಪದಾರ್ಥಗಳ ಹೆಚ್ಚಳಕ್ಕೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ಇವೆಲ್ಲದರ ಹೊಡೆತವೂ ಸಾಮಾನ್ಯ ವ್ಯಕ್ತಿಗೆ ಬೀಳುತ್ತಿದೆ. ಮೊದಲೇ ಕೋವಿಡ್ ಹೊಡೆತದಿಂದ ಜರ್ಜರಿತವಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಬರೆ ಬಿದ್ದಿದೆ. ಹೋಗಲಿ ಬೆಲೆ ಏರಿಕೆಯಾದರೂ ಪರವಾಗಿಲ್ಲ ಎಂದು ರೈತರು ಬರ್ಜರಿ ಬೆಳೆ ಬೆಳೆದರೆ ಅದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೀದಿಯಲ್ಲಿ ಸುರಿಯುವ ಪರಿಸ್ಥಿತಿ ಇದೆ. ಹೀಗಾಗಿ ಸರಕಾರ ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡಿಸಬೇಕು. ಸಾಧ್ಯವಾದಷ್ಟು ಬೆಲೆ ಏರಿಕೆ ಬಿಸಿಗೆ ಸಿಲುಕಿಸದೇ ಲೋಡ್ ಶೆಡ್ಡಿಂಗ್ ತೆಗೆದು ಗುಣಮಟ್ಟದ ವಿದ್ಯುತ್ ಪೂರೈಕೆ ಸರಕಾರದ ಕರ್ತವ್ಯ.