Wednesday, 11th December 2024

ಕಹಿನೆನಪುಗಳ ಆಚರಣೆ ಬೇಡ

ಹಳೆಯ ಕಹಿ ನೆನಪುಗಳನ್ನು ಮರೆತು ಮುಂದೆ ಸಾಗಬೇಕೆನ್ನುವುದು ನಮ್ಮ ಹಿರಿಯರ ಅನುಭವದ ಮಾತು. ಹಿಂದಿನ ಕಹಿ ಘಟನೆಗಳು ನಮಗೆ ಮುಂದೆ ಸತ್ಪಥ ತೋರಿಸುವ ದಾರಿ ದೀಪವಾಗಬೇಕು. ದೇಶದ ಚರಿತ್ರೆಯಲ್ಲಾಗಲಿ, ನಮ್ಮ ವೈಯಕ್ತಿಕ ಜೀವನದಲ್ಲಾಗಲಿ ಹಿಂದೆ ಆಗಿ ಹೋದ ದುರದೃಷ್ಟಕರ ಘಟನೆಗಳನ್ನು ವರ್ತಮಾನ ಕಾಲದಲ್ಲೂ ನೆನಪಿಸಿಕೊಂಡು ಕೊರಗುವುದರಲ್ಲಿ ಅಥವಾ ಗುಲ್ಲೆಬ್ಬಿಸುವುದರಲ್ಲಿ ಅರ್ಥವಿಲ್ಲ.

೧೯೭೫ರ ಜೂನ್ ೨೫ರಂದು ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಘಟನೆ ೨೧ ತಿಂಗಳ ಕಾಲ ದೇಶದ ಪಾಲಿಗೆ ಕರಾಳ ಅಧ್ಯಾಯ ವಾಗಿತ್ತೆನ್ನುವುದರಲ್ಲಿ ಎರಡು ಮಾತಿಲ್ಲ. ಈ ಘಟನೆಗೆ ೫೦ ವರ್ಷ ಸಂದ ನೆನಪಿನಲ್ಲಿ ನೂತನ ಸಂಸತ್ತಿನ ಮೊದಲ ಅಧಿವೇಶನದಲ್ಲಿಯೇ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ. ಇದೀಗ ಜೂನ್ ೨೫ರ ದಿನವನ್ನು ‘ಸಂವಿಧಾನ ಹತ್ಯಾದಿನ’ ಹೆಸರಿನಲ್ಲಿ ಪ್ರತೀ ವರ್ಷ ಸ್ಮರಿಸಲು ಕೇಂದ್ರ ಸರಕಾರ ಮುಂದಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಈ ಸಂಬಂಧ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತ ಎನ್ನುವುದರಲ್ಲಿ ಅನುಮಾನವಿಲ್ಲ.

‘ಸಂವಿಧಾನ ರಕ್ಷಣೆ’ ಹೆಸರಿನಲ್ಲಿ ಗದ್ದಲ ಎಬ್ಬಿಸುತ್ತಿರುವ ಇಂಡಿಯಾ ಒಕ್ಕೂಟ ವಿಶೇಷವಾಗಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ತಿರುಗೇಟು ಕೊಡಲೆಂದೇ ಮೋದಿ ಸರಕಾರ ಈ ತೀರ್ಮಾನಕ್ಕೆ ಬಂದಿದೆ ಎನ್ನುವುದು ಸುಸ್ಪಷ್ಟ. ಆದರೆ ಸಂವಿಧಾನ ಹತ್ಯಾದಿನ ಎಂದು ಪ್ರತೀವರ್ಷ ಈ ಘಟನೆಯನ್ನು ಮೆಲುಕು ಹಾಕುವುದರಲ್ಲಿ ಯಾವ ಔಚಿತ್ಯವೂ ಇಲ್ಲ. ಚರಿತ್ರೆಯಲ್ಲಿ ಆಗಿ ಹೋದ ಪ್ರಮಾದಗಳನ್ನು ಒಬ್ಬರಿಗೊಬ್ಬರು ಆರೋಪಿಸುತ್ತಾ ಸಾಗಿದರೆ ಇಂತಹ ದಿನಗಳಿಗೆ ಅಂತ್ಯವಿರಲಾರದು. ಒಂದು ವೇಳೆ ಈ ನಿರ್ಧಾರ ಕಾರ‍್ಯರೂಪಕ್ಕೆ ಬಂದರೆ ಪ್ರತೀ ವರ್ಷವೂ ಈ ವಿಷಯದಲ್ಲಿ ಆರೋಪ- ಪ್ರತ್ಯಾರೋಪಗಳು ಮುಂದುವರಿಯು ತ್ತಲೇ ಸಾಗಲಿದೆ.

ಇದರ ಬದಲು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳು, ಶ್ರೇಷ್ಠತೆಯನ್ನು ತಿಳಿಸಿಕೊಡುವ ಕೆಲಸಕ್ಕೆ ಆದ್ಯತೆ ನೀಡಬೇಕು. ಶಾಲಾ ಕಾಲೇಜುಗಳಲ್ಲಿ
ಸಂವಿಧಾನದ ಓದಿನ ಬಗ್ಗೆ ವಿಶೇಷ ಕಾರ‍್ಯಕ್ರಮವನ್ನು ರೂಪಿಸಬಹುದು. ಇನ್ನು ತುರ್ತುಪರಿಸ್ಥಿತಿಯ ವಿಚಾರಕ್ಕೆ ಬಂದರೆ ೧೯೭೭ರ ಚುನಾವಣೆಯಲ್ಲಿ ಪ್ರಧಾನಿ
ಇಂದಿರಾಗಾಂಧಿ ಅವರನ್ನು ಸೋಲಿಸುವ ಮೂಲಕ ಈ ನಿರ್ಧಾರಕ್ಕೆ ತಕ್ಕ ಪಾಠ ಕಲಿಸಿದ್ದರು. ಮುಂದೆ ತಮ್ಮ ಸಂದರ್ಶನವೊಂದರಲ್ಲೂ ತಮ್ಮ ನಿರ್ಧಾರ ತಪ್ಪೆನ್ನುವುದನ್ನು ಇಂದಿರಾ ಒಪ್ಪಿಕೊಂಡಿದ್ದರು. ತುರ್ತುಪರಿಸ್ಥಿತಿ ವಿರುದ್ಧ ಎಷ್ಟೇ ಹೋರಾಟ ನಡೆದರೂ ಆಗ ಆದ ಪ್ರಮಾದಗಳಿಗೆ ನ್ಯಾಯ ಕೊಡಿಸುವ ಕೆಲಸ ಇನ್ನೂ ಆಗಿಲ್ಲ. ಈ ವಿಷಯದಲ್ಲಿ ಇಂದಿರಾ ಅವರ ಬೆಂಬಲಕ್ಕೆ ನಿಂತ ಅನೇಕರು ನಂತರದ ದಿನಗಳಲ್ಲೂ ಅಧಿಕಾರದಲ್ಲಿ ಮುಂದುವರಿದಿದ್ದರು.