ಅತ್ಯಂತ ಜನಪ್ರೀತಿ ಗಳಿಸಿದ ಹಾಗೂ ಭಾರತ ಕಂಡ ಅಪ್ರತಿಮ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ. ಅತಿ ಹೆಚ್ಚು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.
ಭಾರತದ ರಾಜಕಾರಣದಲ್ಲಿ ನೆಹರೂ, ಇಂದಿರಾಗಾಂಧಿ, ಮನಮೋಹನಸಿಂಗ್ ನಂತರ ಅತಿಹೆಚ್ಚು ಕಾಲ ಆಡಳಿತ ನಡೆಸುವ ಮೂಲಕ ಪ್ರಸ್ತುತ ನಾಲ್ಕನೆ ಸ್ಥಾನದಲ್ಲಿದ್ದರೂ, ಜನಪ್ರಿಯತೆಯಲ್ಲಿ ಬಹಳಷ್ಟು ಉತ್ತುಂಗವೇರಿದ್ದಾರೆ. ಭಾರತ ಮಾತ್ರವಲ್ಲದೆ ಹೊರದೇಶಗಳಲ್ಲಿಯೂ ತನ್ನ ಜನಪ್ರಿಯತೆ ವಿಸ್ತರಿಸಿಕೊಂಡಿರುವುದಕ್ಕೆ ಅಮೆರಿಕದಲ್ಲಿ ಆಚರಿಸಿದ ಹೌ ಡಿ ಮೋದಿ ಕಾರ್ಯ ಕ್ರಮವೇ ಸಾಕ್ಷಿ.
ತನ್ನ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಜನಪ್ರಿಯತೆ ವಿಸ್ತರಿಸಿಕೊಂಡಿರುವ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿಯವರ ಪಾಲಿಗಿದೆ. ಹಾಗಾದರೆ ಇತರೆ ಪ್ರಧಾನಿಗಳಿಗಿಂತಲೂ ಇಷ್ಟೊಂದು ಪ್ರಭಾವ ಬೀರಲು ಇರುವ ಕಾರಣವೇನು? ಎನ್ನುವ ಭಾವನೆ ಬಹಳಷ್ಟು ಜನರನ್ನು ಕಾಡುತ್ತದೆ. ಇದಕ್ಕೆ ಉತ್ತರ ಎಂದರೆ ಮಾತು ಮತ್ತು ಕೃತಿ!. ಬಿಜೆಪಿ ಸಾಮಾನ್ಯ ಕಾರ್ಯಕರ್ತನಿಂದ ಪ್ರಧಾನಿ ಆಗುವವರೆಗೆ ಅವರು ಅಳವಡಿಸಿಕೊಂಡು ಬಂದ ಸ್ವದೇಶಿ ಚಿಂತನೆಯನ್ನು ತಮ್ಮ ಭಾಷಣಗಳಲ್ಲಿ ಸಾರುತ್ತಲೇ ಸಾಗಿದರು. ಕೇವಲ ಸ್ವದೇಶಿ ಚಿಂತನೆಯನ್ನು ಭಾಷಣಕ್ಕೆ ಸೀಮಿತಗೊಳಿಸದೆ ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸಿದರು.
ಗಾಂಧಿಯನ್ನು ವಿರೋಧಿಸುವ ಪಕ್ಷ ಬಿಜೆಪಿ ಎಂಬ ಆರೋಪವಿದ್ದ ಸಂದರ್ಭದಲ್ಲಿ ಗಾಂಧಿಯವರ ಸ್ವಚ್ಛ ಭಾರತ ಕಲ್ಪನೆಯನ್ನು ಜಾರಿಗೆ ತಂದು ನಿಬ್ಬೆೆರಗುಗೊಳಿಸಿದರು. ಜನರಿಗಾಗಿ ಬಹಳಷ್ಟು ಯೋಜನೆಗಳನ್ನು ಘೋಷಿಸುವುದರ ಜತೆಗೆ, ಆ ಯೋಜನೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಎಷ್ಟು ಮುಖ್ಯ ಎಂಬುದರ ಕುರಿತು ತಮ್ಮ ಭಾಷಣಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಕರೋನಾ ಸಂಕಷ್ಟದಲ್ಲಿ ಹಾಗೂ ಪ್ರಕೃತಿ ವಿಕೋಪ, ಹಾನಿ ಸಂದರ್ಭದಲ್ಲಿ ತಮ್ಮ ಭಾಷಣಗಳಿಂದ ಜನರಲ್ಲಿ ಭರವಸೆಯನ್ನು ತುಂಬಿದರು. ಈ ಕಾರಣಗಳಿಂದಾಗಿಯೇ ಮೋದಿಯವರು ಜನತೆಗೆ ಹತ್ತಿರವಾಗಿ, ಜನಪ್ರೀತಿಯ ಪ್ರಧಾನಿಯಾಗಿ ಕಂಗೊಳಿಸುತ್ತಿ ದ್ದಾರೆ.