Sunday, 15th December 2024

ಇಡಿ ಕಾರ್ಯ ಶ್ಲಾಘನೀಯ

ದೇಶದ ಸರಕಾರಿ ಸ್ವಾಯತ್ತ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅವುಗಳಿಗೆ ಮಹತ್ವ ದೊರೆಯುವುದು
ಕಡಿಮೆ. ಕೆಲವೊಮ್ಮೆ ಮಹತ್ವ ಪಡೆದ ನಂತರವಷ್ಟೇ ಅವುಗಳ ಶ್ರಮ, ಸಾಧನೆ ಬಹಿರಂಗಗೊಳ್ಳುವುದು.

ಇಂಥ ಮಾತಿಗೆ ಉದಾಹರಣೆ ಲೋಕಾಯುಕ್ತ ಸಂಸ್ಥೆ. ಕೆಲವಾರು ವರ್ಷಗಳ ಹಿಂದೆ ಲೋಕಾಯುಕ್ತ ಸಂಸ್ಥೆಯ ಪರಿಚಯವಿರ ಲಿಲ್ಲ. ಆದರೆ ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿವಾಸದ ಮೇಲೆ ಲೋಕಾಯುಕ್ತರ ತಂಡ ದಾಳಿ ನಡೆಸಿದ್ದರಿಂದ
ಲೋಕಾಯುಕ್ತ ಮಹತ್ವಪಡೆಯಿತು. ಇದು ಜನಪ್ರಿಯತೆಯಲ್ಲ, ಜನರ ವಿಶ್ವಾಸಗಳಿಸುವಲ್ಲಿ, ಜನರಲ್ಲಿ ಸಂಸ್ಥೆಯ ಮೇಲೆ ನಂಬಿಕೆ ಬರುವಲ್ಲಿ ಸಾಧಿಸಿದ ಮಹತ್ಕಾರ್ಯ.

ಇದೇ ರೀತಿ ರಾಜ್ಯದ ಪ್ರಮುಖ ರಾಜಕಾರಣಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರಿಂದ ಜಾರಿ ನಿರ್ದೇಶನಾಲಯ (ಇಡಿ) ಬಗ್ಗೆ
ಜನರಲ್ಲಿ ನಂಬಿಕೆ ಮೂಡಿತು. ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯ 8 ಕೋಟಿ ಆಸ್ತಿ ಜಪ್ತಿ ಮಾಡಿದ್ದರಿಂದ ಇಡಿ ಬಗ್ಗೆ ರಾಜ್ಯದ ಜನತೆಗೆ ನಂಬಿಕೆ ಬರಲಾರಂಭಿಸಿತು. ಇದೀಗ ಜಾರಿ ನಿರ್ದೇಶನಾಲಯವು 325 ಕೋಟಿ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ 197 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ.

ಲೋಕಾಯುಕ್ತವಾಗಲಿ, ಇಡಿ ಆಗಲಿ ತಮಗೆ ದೊರೆತಿರುವ ಅಧಿಕಾರದ ಚೌಕಟ್ಟಿನಲ್ಲಿಯೇ ಕೆಲವೊಮ್ಮೆ ಇಂಥ ಘಟನೆಗಳಿಂದ
ಗಮನಸೆಳೆಯುತ್ತಿರುವುದು ಉತ್ತಮ ಕಾರ್ಯ. ಸಿಕ್ಕಿಂ ಹಾಗೂ ಕೇರಳದಲ್ಲಿರುವ ರೆಸಾರ್ಟ್ ಸೇರಿ ಯೂನಿಟೆಕ್ ಸಮೂಹ ಸಂಸ್ಥೆಗೆ ಸೇರಿದ ೧೦ ಸ್ಥಿರಾಸಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅನ್ವಯ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಇತ್ತೀಚೆಗೆ ಇಂಥ ಮಹತ್ವದ ದಾಳಿಗಳ ಮೂಲಕ ಗಮನ ಸೆಳೆಯುತ್ತಿರುವ ಜಾರಿ
ನಿರ್ದೇಶನಾಲಯ ಜನತೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತಿರುವುದು ಶ್ಲಾಘನೀಯ ಕಾರ್ಯ.