Sunday, 13th October 2024

ಸಮಚಿತ್ತದ ಸಕಾರಾತ್ಮಕ ಬಜೆಟ್

ಇಪ್ಪತ್ತೊಂದನೆಯ ಶತಮಾನದ ಬಹು ಪ್ರಮುಖ ಬಜೆಟ್‌ನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.

ಕಳೆದ ವರ್ಷವಿಡೀ ದೇಶವನ್ನು ಕಾಡಿದ ಕೋವಿಡ್ ೧೯ ಸಮಸ್ಯೆ, ಅದರಿಂದ ಉದ್ಭವಿಸಿದ ಲಾಕ್ ಡೌನ್ ಸ್ಥಿತಿ, ಹಲವು ತಿಂಗಳುಗಳ ಕಾಲ ಉದ್ಯಮಗಳು ಅನುಭವಿಸಿದ ನಷ್ಟ, ಜನಸಾಮಾನ್ಯರು ಎದುರಿಸಿದ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಮತ್ತು ವಿಶ್ವದಾದ್ಯಂತ ಉದ್ಭವಿಸಿದ ಸಂಕೀರ್ಣ ಸಮಸ್ಯೆಗಳು – ಈ ರೀತಿ ಬಹು ಆಯಾಮದ ಸಂಕಷ್ಟ ಸನ್ನಿವೇಶದ ಹಿನ್ನೆಲೆಯಲ್ಲಿ ಈ ವರ್ಷದ ಬಜೆಟ್‌ನ್ನು ವಿತ್ತ ಸಚಿವರು ಮಂಡಿಸಿದ್ದಾರೆ.

ಹಿಂದೆಂದೂ ಕಾಣದ ಆರ್ಥಿಕ ತೊಡಕಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡೇ ಈ ಬಾರಿಯ ಬಜೆಟ್‌ನ್ನು ಸ್ವೀಕರಿಸಬೇಕೇ ಹೊರತು, ಹಿಂದಿನ ವರ್ಷಗಳ ಬಿಕ್ಕಟ್ಟು ರಹಿತ ಸನ್ನಿವೇಶಗಳ ಬಜೆಟ್‌ಗೆ ಹೋಲಿಸಲಾಗದು. ಈ ಹಿನ್ನೆಲೆಯಲ್ಲಿ ನೋಡಿದರೆ, ಈ ಬಾರಿಯ ಬಜೆಟ್‌ನಲ್ಲಿ ಸಕಾರಾತ್ಮಕ ಅಂಶಗಳನ್ನೇ ಹೆಚ್ಚಿನ ಪ್ರಮಾಣದಲ್ಲಿವೆ.

ನಮ್ಮ ದೇಶವೂ ಸೇರಿದಂತೆ, ವಿಶ್ವದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನೇ ತಲ್ಲಣಗೊಳಿಸಿದ ಕೋವಿಡ್ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ, ಈ ಬಜೆಟ್ ಕುರಿತಾದ ವಿಪಕ್ಷಗಳ ಟೀಕೆಗಳು ಅಸಮಂಜಸವಾಗಿ ಕಾಣಿಸುತ್ತವೆ. ವಿವಿಧ ವಿರೋಧ ಪಕ್ಷಗಳ ರಾಜಕೀಯ ನಾಯಕರು ತಮ್ಮ ಮೂಗಿನ ನೇರಕ್ಕೆ ಟೀಕೆಗಳನ್ನು ಮಾಡಿದ್ದು, ಅವರೆಲ್ಲರೂ ಕೋವಿಡ್ 19 ವಿಧಿಸಿದ ಸಂಕಷ್ಟ ಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಅಭಿಪ್ರಾಯ ಮಂಡಿಸಿದಂತಿದೆ.

ಈ ಬಜೆಟ್‌ನಲ್ಲಿ ಕೃಷಿ ವಲಯ ಇನ್ನಷ್ಟು ಬಲಗೊಳ್ಳಲು ಹಲವು ರೀತಿಯ ಸೆಸ್‌ಗಳನ್ನು ವಿಧಿಸಿರುವ ಪ್ರಯತ್ನ ವಿನೂತನ. ಆದಾಯ ತೆರಿಗೆಯಲ್ಲಿ ಪ್ರಮುಖ ಬದಲಾವಣೆ ಇಲ್ಲದೇ ಇರುವುದು ಮತ್ತು ಹಿರಿಯ ನಾಗರಿಕರಿಗೆ ಸಣ್ಣ ಪ್ರಮಾಣದ ರಿಯಾಯತಿ ಘೋಷಿಸಿರುವುದು ನೀರಸ ಎನಿಸಿದರೂ, ತೆರಿಗೆ ಹೆಚ್ಚಳವಿಲ್ಲದೇ ಪರಿಸ್ಥಿತಿಯನ್ನು ನಿಭಾಯಿಸಿರುವುದು ಗಮನಕ್ಕೆ ಬರುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಮಂಡಿಸಿದ ಸಮಚಿತ್ತದ ಸಕಾರಾತ್ಮಕ ಬಜೆಟ್ ಎಂದು ಈ ಬಜೆಟ್‌ನ್ನು ಗುರುತಿಸಬಹುದು.