Saturday, 14th December 2024

ಎತ್ತಿನಹೊಳೆ: ಮುಗಿಯದ ಕಾಮಗಾರಿ

ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ೫೦೦ ಎಕರೆ ಅರಣ್ಯ ಭೂಮಿಯನ್ನು ಒದಗಿಸಲು ಅರಣ್ಯ ಇಲಾಖೆ ಒಪ್ಪಿಗೆ
ಸೂಚಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕುಡಿಯುವ ನೀರು ಒದಗಿಸುವ ಹೆಸರಿನಲ್ಲಿ ಜಾರಿಗೆ ಬಂದ ಯೋಜನೆ ಆರಂಭವಾಗಿ ೧೦ ವರ್ಷಗಳೇ ಕಳೆದಿವೆ. ಆದರೆ ಈ ತನಕ ಒಂದು ಹನಿ ನೀರನ್ನೂ
ಹರಿಸಲು ಸಾಧ್ಯವಾಗಿಲ್ಲ. ೨೦೧೪ರಲ್ಲಿ ಯೋಜನೆ ಆರಂಭದಲ್ಲಿ ನಿಗದಿಪಡಿಸಿದ ೧೨,೯೧೨ ಕೋಟಿ ರೂ. ಯೋಜನಾ ವೆಚ್ಚ ಈಗ ೩೦ ಸಾವಿರ ಕೋಟಿ ರೂ. ಮೀರಿ ಬೆಳೆದಿದೆ. ಈ ಕಾರಣಕ್ಕಾಗಿಯೇ ಸರಕಾರದ ವಲಯಗಳಲ್ಲಿ ‘ಎತ್ತಿನ ಹೊಳೆಯಲ್ಲಿ ಮಿಂದುಂಡವನೇ ಜಾಣ’ ಎಂಬ ಗಾದೆ ಹುಟ್ಟಿಕೊಂಡಿದೆ. ಈ
ಯೋಜನೆಗಾಗಿ ೧೩.೯೦ ಹೆಕ್ಟೇರ್ ಅರಣ್ಯ ಭೂಮಿ ಬಳಸಿಕೊಳ್ಳುತ್ತಿದ್ದು ೪,೯೯೫ ಮರಗಳನ್ನು ಕಡಿಯಲಾಗುತ್ತದೆ ಎಂದು ಈ ಹಿಂದೆ ರಾಜ್ಯ ಸರಕಾರ
ಸುಪ್ರೀಕೋರ್ಟ್‌ಗೆ ಮಾಹಿತಿ ನೀಡಿತ್ತು.

ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಅನುಷ್ಠಾನಕ್ಕೆ ಬರುತ್ತಿರುವ ಯೋಜನೆಗೆ ಎಷ್ಟು ಮರಗಳನ್ನು  ಕಡಿದುರುಳಿಸಿರಬಹುದೆಂದು ಅಲ್ಲಿಗೆ ಭೇಟಿ ನೀಡಿದ ವರಿಗೆ ಕಣ್ಣೋಟಕ್ಕೇ ಅಂದಾಜಿಸುವುದು ಕಷ್ಟವೇನಲ್ಲ. ಇದೀಗ ೫೦೦ ಎಕರೆ ಅರಣ್ಯ ಭೂಮಿ ಎಂದ ಮೇಲೆ ಅಲ್ಲೂ ಸಾವಿರಾರು ಮರಗಳು ಉರುಳು ವುದು ಖಚಿತ. ಅರಣ್ಯ ಸಚಿವ ಈಶ್ವರ ಖಂಡ್ರೆ, ಕಂದಾಯ ಸಚಿವ ಕೃಷ್ಣಭೈರೇಗೌಡ ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಯೋಜನೆಗೆ ಬಳಸಿಕೊಳ್ಳುವ ಅರಣ್ಯ ಭೂಮಿಗೆ ಬದಲಾಗಿ ಕಂದಾಯ ಇಲಾಖೆಯ ೫೦೦ ಎಕರೆ ಭೂಮಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಈ ಹಿಂದೆಯೂ, ಎತ್ತಿನ ಹೊಳೆಯಲ್ಲಿ ಉರುಳಿದ ಮರಗಳಿಗೆ ಪರ‍್ಯಾಯವಾಗಿ ಅರಣ್ಯ ಬೆಳೆಸಲಾಗುವುದೆಂದು ಹೇಳಲಾಗಿತ್ತು.

ಆದರೆ ಇದುವರೆಗೆ ಅದು ಕಾರ‍್ಯರೂಪಕ್ಕೆ ಬಂದಿಲ್ಲ. ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಈ ಯೋಜನೆ ಆರಂಭದಿಂದಲೂ ಗೊತ್ತು ಗುರಿ ಇಲ್ಲದೆ ಸಾಗುತ್ತಿದೆ. ಎತ್ತಿನ ಹೊಳೆಯಲ್ಲಿ ೨೪ ಟಿಎಂಸಿ ನೀರು ಲಭ್ಯ ಎಂಬ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳ ಮಾತಿಗೆ ಇನ್ನೂ ಪುರಾವೆ ಸಿಕ್ಕಿಲ್ಲ. ಈ ನಡುವೆಯೇ ದಕ್ಷಿಣ ಕನ್ನಡದ ನೇತ್ರಾವತಿ ನದಿ ಸೇರುತ್ತಿದ್ದ ಹೊಂಗಡಹಳ್ಳ, ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆಗಳ ನೀರನ್ನು ಪೂರ್ವಾಭಿಮುಖವಾಗಿ ಸಾಗಿಸುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.

ಜಲ ಸಂಗ್ರಹಾಗಾರಗಳ ಕಾಮಗಾರಿಯೂ ಮುಗಿದಿದೆ. ಆದರೆ ಮುಂದಿನ ತಿಂಗಳು ೪೮ ಕಿ.ಮೀ.ವರೆಗೆ ನೀರು ಹರಿಸುವ ಡಿಸಿಎಂ ಶಿವಕುಮಾರ್ ಅವರ ಭರವಸೆ ಈಡೇರುವುದು ಇನ್ನೂ ಸಂಶಯವಾಗಿ ಕಾಣುತ್ತಿದೆ.